ಸೊಲ್ಲಾಪುರ: ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಹೊಗಳಿ, ಮಾಜಿ ಸಿಎಂ ಸಿದ್ದರಾಮಯ್ಯ ರನ್ನು ತೆಗಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಸೊಲ್ಲಾಪುರದಲ್ಲಿ ಮಾತನಾಡಿದ ಇಬ್ರಾಹಿಂ, ಯಡಿಯೂರಪ್ಪ ನನಗೆ ಆತ್ಮೀಯ ಸ್ನೇಹಿತರು. ನಮ್ಮಿಬರ ರೈಲು ಒಂದೇ, ಆದರೆ ರೈಲ್ವೆ ಸ್ಟೇಷನ್ ಮಾತ್ರ ಬೇರೆ. ನಾವು ಅದ್ಯಾವಾಗ ಸೇರುತ್ತೇವೋ ಗೊತ್ತಿಲ್ಲ. ಒಂದಲ್ಲ ಒಂದು ದಿನ ನಾವು ರಾಜಕೀಯವಾಗಿ ಸೇರುತ್ತೇವೆ ಅನ್ನೋ ವಿಶ್ವಾಸ ಇದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಸೇರ್ಪಡೆಯಾಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗರಂ ಆದ ಇಬ್ರಾಹಿಂ, ಪ್ರತ್ಯೇಕ ಲಿಂಗಾಯಿತ ಧರ್ಮ ಬೇಡ. ಈ ವಿಚಾರಕ್ಕೆ ಕೈ ಹಾಕಬೇಡಿ ಎಂದು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಸಲಹೆ ನೀಡಿದ್ದೆ. ಆದರೆ ನಾನು ಎಷ್ಟೇ ಹೇಳಿದರೂ ಅವರು ಕೇಳಲೇ ಇಲ್ಲ. ಎಲ್ಲಿ ಲಿಂಗಾಯತರು ಹೆಚ್ಚು ಇದ್ದಾರೋ ಅಲ್ಲಿ ಜಗಳ ಇಲ್ಲ. ಕಾರಣ, ಅದೊಂದು ಮ್ಯಾಗ್ನೆಟಿಕ್ ಪವರ್ ಇದ್ದಂಗೆ. ಬೇರೆ ಸಮಾಜದವರನ್ನು ಎಳೆಯುತ್ತಿರುತ್ತೆ ಅದು. ಅದಕ್ಕೆ ಈ ಜಗಳದಲ್ಲಿ ಬೀಳಬೇಡ ಎಂದು ಹೇಳಿದ್ದೆ. ಇದು ಎರಡು ಅಯ್ನೋರ್ ಜಗಳ. ಸತ್ ಮ್ಯಾಲೆ ಅವ್ರ ಕಾಲು ಹಿಡಬೇಕು. ಜೀವಂತ ಇರಬೇಕಾದಾಗಾಲೇ ಕಾಲ್ ಇಟ್ಟುಬಿಡ್ತಾರೆ ನೋಡು ಅಂತ ಹೇಳಿದೆ. ಆದರೆ ಸಿದ್ದರಾಮಯ್ಯ ನನ್ ಮಾತು ಕೇಳಿಲ್ಲ ಎಂದು ಗುಡುಗಿದರು.
ನೀನು ಲಿಂಗಾಯತ ಪರ ಅಂತ ನಮ್ಮ ಪಾರ್ಟಿಯವರೂ ಹೇಳುತ್ತಾ ಇದ್ದರು. ನಾನು ಲಿಂಗಾಯತ ಪರ, ಬ್ರಾಹ್ಮಣ ವಿರುದ್ಧ ಅಂತ ಅಲ್ಲ. ನಾನು ಯಾಕೆ ಲಿಂಗಾಯತ ಪರ ಇದ್ದೇನೆ ಅಂದರೆ ಬೇರೆ ಸಮಾಜವನ್ನು ಕರೆದೊಯ್ಯುವ ಶಕ್ತಿ ಆ ಸಮಾಜಕ್ಕೆ ಇದೆ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ