ಕಾಂಗ್ರೆಸ್ ಗೆ ವಿದಾಯ ಹೇಳಿದ ಸಿ.ಎಂ.ಇಬ್ರಾಹಿಂ ; ಸಿದ್ದರಾಮಯ್ಯಗೆ ರಾಜಕೀಯ ಜೀವನ ಕೊಟ್ಟಿದ್ದಕ್ಕೆ ಒಳ್ಳೆಯ ಕೊಡುಗೆ ಕೊಟ್ರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೂ ನನಗೂ ಮುಗಿದ ಅಧ್ಯಾಯ. ಪರಿಷತ್ ಸ್ಥಾನಕ್ಕೂ ಶೀಘ್ರವೇ ರಾಜೀನಾಮೆ ನೀಡುತ್ತೇನೆ ಎಂದು ಎಂಎಲ್ ಸಿ, ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರಿಷತ್ ವಿಪಕ್ಷ ನಾಯಕರನ್ನಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ನೇಮಿಸುವ ಮೂಲಕ ಎಐಸಿಸಿ ನನ್ನ ಮೇಲಿನ ಭಾರ ಕಡಿಮೆ ಮಾಡಿದೆ. ಎಐಸಿಸಿ ತೀರ್ಮಾನ ನೋಡಿ ಮನಸ್ಸಿಗೆ ಸಂತೋಷವಾಗಿದೆ. ಹರಿಪ್ರಸಾದ್ ಹಾಗೂ ಶಿವಕುಮಾರ್ ಒಳ್ಳೆಯ ಟೀಮ್, ವಿಚಾರಧಾರೆಗಳು ಒಂದೇ ಆಗಿದ್ದರಿಂದ ಅವರನ್ನು ನೇಮಕ ಮಾಡಿರಬಹುದು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯಗಾಗಿ ದೇವೇಗೌಡರಂತಹ ಮಹಾನಾಯಕರನ್ನು ಬಿಟ್ಟು ಬಂದೆ. ತಬ್ಬಲಿ ನೀ ಆದೆಯ ಎಂಬತಾಗಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿದ್ದರು ಆಗ ಅವರಿಗೆ ಸಹಾಯ ಮಾಡಿದೆ. 25 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದೆ. ಯೋಜನಾ ಆಯೋಗದ ಅಧ್ಯಕ್ಷನಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದೆ. ಅನ್ನಭಾಗ್ಯದಂತಹ ಮಹತ್ವದ ಯೋಜನೆ ಬಗ್ಗೆ ಸಲಹೆ ನೀಡಿದೆ. ಸಿದ್ದರಾಮಯ್ಯನವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆ. ಬಾದಾಮಿಗೆ ಕರೆತಂದು ನಾಮಿನೇಷನ್ ಮಾಡಿಸಿದೆ. ಸಿದ್ದರಾಮಯ್ಯನವರಿಗೆ ಸಹಾಯ ಮಾಡಿದ್ದಕ್ಕೆ ಅವರು ಇಂದು ನನಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ನನಗೆ ಸ್ಥಾನ ತಪ್ಪಿಸಿದ್ದಕ್ಕೆ ಸಿದ್ದರಾಮಯ್ಯನವರು ಉತ್ತರಿಸಲಿ ಎಂದು ಹೇಳಿದರು.
ಅವರು ಬಹಳ ದೊಡ್ಡವರು, ಸಿದ್ದರಾಮಯ್ಯ ಬಗ್ಗೆ ಮಾತನಾಡಲ್ಲ. ಡಿ.ಕೆ.ಶಿವಕುಮಾರ್ ಗೂ ನನಗೂ ಹೊಂದಾಣಿಕೆಯಾಗಲ್ಲ. ಶೀಘ್ರದಲ್ಲಿಯೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದೇವೇಗೌಡರೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇನೆ ಎಂದರು.
ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಜೆಪಿಯೊಂದಿಗೆ ಒಂದಾಗಲು ಹೇಗೆ ಸಾಧ್ಯ? ಬಿಜೆಪಿ ಕೇಶವ ಕೃಪ, ನಾನು ಬಸವ ಕೃಪ. ಕುಮಾರಸ್ವಾಮಿಯವರು ಬೆಳಿಗ್ಗೆಯೂ ಕರೆ ಮಾಡಿ ಮಾತನಾಡಿದ್ದರು, ಇನ್ನು ಹಲವು ರಾಜಕೀಯ ಪಕ್ಷಗಳು ಇವೆ. ಕಾದುನೋಡಿ ಕಾಲಾಯ ತಸ್ಮೈ ನಮ: ಎಂದು ಹೇಳಿದರು.
ಹಲವು ಪ್ರಭಾವಿ ಬಿಜೆಪಿ, ಜೆಡಿಎಸ್ ಮುಖಂಡರು ನಾಳೆ ಕಾಂಗ್ರೆಸ್ ಸೇರ್ಪಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ