Election News

*ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ-ಜೆಡಿಎಸ್ ನಾಯಕರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಿ.ಪಿ.ಯೋಗೇಶ್ವರ್ ಇಂದು ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನವೆಂಬರ್ 13ರಂದು ನಡೆಯಲಿರುವ ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಇಂದು ಭರ್ಜರಿ ರೋಡ್ ಶೋ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.

ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿರುವ ಬಸವನಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಳಿಕ ತಾಲೂಕು ಕಚೇರಿಗೆ ಆಗಮಿಸಿದ ಸಿ.ಪಿ.ಯೋಗೇಶ್ವರ್ ತಮ್ಮ ಉಮೇದುವಾರಿ ಸಲ್ಲಿಕೆ ಮಾಡಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವ ರಾಮಲಿಂಗಾರೆಡ್ಡಿ, ಡಿ.ಕೆ.ಸುರೇಶ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ರಿಸಲ್ಟ್ ನೋಡ್ತೀನಿ: ಯೋಗೀಶ್ವರ್ 50 ಸಾವಿರ ಮತಗಳಿಂದ ಗೆಲ್ಬೇಕು: ಸಿ.ಎಂ.ಸಿದ್ದರಾಮಯ್ಯ ಕರೆ*

ಚನ್ನಪಟ್ಟಣದ ಸಂಪೂರ್ಣ ಅಭಿವೃದ್ಧಿ ನನ್ನ ಜವಾಬ್ದಾರಿ: ನಮ್ಮ ಸರ್ಕಾರ ಜನಕಲ್ಯಾಣದಲ್ಲಿ ಸದಾ ಮುಂದೆ: ಸಿಎಂ‌

ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ: ಸಿಎಂ

ಚನ್ನಪಟ್ಟಣ ಅ 24: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ನಾನೂ ನೋಡ್ತೀನಿ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ವರ್ ಅವರು ಜಯಗಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಯೋಗೀಶ್ವರ್ ಪರ ರೋಡ್ ಶೋ ನಲ್ಲಿ‌ ಭಾಗವಹಿಸಿ ಚನ್ನಪಟ್ಟಣ ಜನತೆಗೆ ಕರೆ ನೀಡಿದರು.

ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು ಕಾಂಗ್ರೆಸ್ಸಿಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೀಶ್ವರ್ ಗೆಲ್ಲುವ ಮೂಲಕ‌ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಿ ಎಂದು ಕರೆ ನೀಡಿದರು.

ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಜನಕಲ್ಯಾಣದ ಸರ್ಕಾರದಲ್ಲಿ ಯೋಗೀಶ್ವರ್ ಇರ್ತಾರೆ

ನಮ್ಮದು ಜನಕಲ್ಯಾಣದ ಸರ್ಕಾರ. ಈ ಸರ್ಕಾರದಲ್ಲಿ ಯೋಗೀಶ್ವರ್ ಅವರು ಇರಬೇಕು. ಹೆಚ್.ಡಿ.ಕುಮಾರಸ್ವಾಮಿಯವರು ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದಾಗಲೂ ಮಾಡದ ಚನ್ನಪಟ್ಟಣದ ಅಭಿವೃದ್ಧಿ ಕೆಲಸಗಳು ಮುಂದಿನ ತಿಂಗಳಿನಿಂದ ಶಾಸಕರಾಗಿ ಯೋಗೀಶ್ವರ್ ಅವರು ಮುಂದುವರೆಸುತ್ತಾರೆ. ಇವತ್ತು ನಾಮಪತ್ರ ಸಲ್ಲಿಕೆ ಬಳಿಕ ನಾನು ಮತ್ತೆ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಮಾಜಿ ಸಚಿವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಯಾರಲ್ಲೂ ಅಸಮಾಧಾನವಿಲ್ಲ: ಎಂದು ಡಿಸಿಎಂ ಡಿ.ಕೆ. ಶಿವಕುಮಾರ್

“ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಕೇಳಿದಾಗ, “ಯಾರಲ್ಲೂ ಅಸಮಾಧಾನವಿಲ್ಲ. ಕೆಲವರು ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಈಗ ಅಸಮಾಧಾನವಿಲ್ಲ. ಸುರೇಶ್ ಅವರೇ ಜವಾಬ್ದಾರಿ ವಹಿಸಿದ್ದು, ಅವರೇ ಅಭ್ಯರ್ಥಿಯನ್ನು ಮೊದಲು ಭೇಟಿ ಮಾಡಿದ್ದಾರೆ. ಪಕ್ಷದ ಹಿತದಿಂದ ನಾವು ಈ ತೀರ್ಮಾನ ಮಾಡಿದ್ದೇವೆ” ಎಂದು ತಿಳಿಸಿದರು.

“ನಾನು ಹಾಗೂ ಮುಖ್ಯಮಂತ್ರಿ ಗಳು ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುತ್ತೇವೆ. ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಇನ್ನು ಮಾಹಿತಿ ಬಂದಿಲ್ಲ. ಮಾಹಿತಿ ಬಂದ ತಕ್ಷಣ ನಾವು ಪ್ರಕಟಿಸುತ್ತೇವೆ. ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಕೆಲವರ ಅಭಿಪ್ರಾಯ ಪಡೆಯಲಾಗುತ್ತಿದೆ. ರಾಜಕೀಯವಾಗಿ ನಮಗೆ ಲಾಭವಾಗುವ ಅಂಶಗಳನ್ನು ನೋಡುತ್ತಿದ್ದೇವೆ” ಎಂದು ತಿಳಿಸಿದರು.

ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಪರವಾಗಿದೆ: ಡಿ. ಕೆ. ಸುರೇಶ್

:

“ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಅವರ ಪರವಾಗಿದೆ. ಮಿಕ್ಕ ವಿಶ್ಲೇಷಣೆ ನೀವು (ಮಾಧ್ಯಮದವರು) ಮಾಡಿಕೊಳ್ಳಿ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದರು.

ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ದುರ್ಬಲವೆಂದು ತೋರಿಸಿಕೊಂಡಿದೆ ಎನ್ನುವ ಸಿ.ಟಿ.ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರ ಹಾಗೂ ಬಿಜೆಪಿಯ ಬಗ್ಗೆ ನಾನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ವಿಶ್ಲೇಷಣೆಯನ್ನು ತೀವ್ರವಾಗಿ ಮಾಡಬಹುದು ಆದರೆ ಮಾಡುವುದಿಲ್ಲ.” ಎಂದರು.

ಬಿಜೆಪಿಯ ಕೆಲ ನಾಯಕರಿಂದಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ ಎಂಬ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ನಾನು ಸಿ.ಟಿ.ರವಿಯವರ ಹೇಳಿಕೆಗೆ ಮಾತ್ರ ಉತ್ತರ ನೀಡುತ್ತಿದ್ದು, ಮಿಕ್ಕ ಚರ್ಚೆ, ವಿಶ್ಲೇಷಣೆಯನ್ನು ನೀವು ಮಾಡಿ. ಮಾಧ್ಯಮದವರು ಹೆಚ್ಚು ವ್ಯಾಖ್ಯಾನ ಮಾಡುವುದರಿಂದ ಇದರ ಸಾಧಕ- ಬಾಧಕಗಳು ಹಾಗೂ ಕಳೆದ ಒಂದು ವಾರಗಳಿಂದ ನಡೆದ ವಿದ್ಯಮಾನಗಳನ್ನು ರಾಜ್ಯದ ಜನರಿಗೆ ನೀವು ತಿಳಿಸಬೇಕು” ಎಂದರು.

ನಿಖಿಲ್ ಅಥವಾ ಅನಸೂಯಾ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ “ಅದು ಆಯಾಯ ಪಕ್ಷದ ತೀರ್ಮಾನ” ಎಂದರು.

ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಪ್ರಬಲ ವ್ಯಕ್ತಿಯನ್ನೇ ಕಾಂಗ್ರೆಸ್ ಗೆ ಕರೆತರಲಾಗುತ್ತದೆ ಎನ್ನುವ ಸುದ್ದಿಯ ಬಗ್ಗೆ ಕೇಳಿದಾಗ “ಕಾದು ನೋಡೋಣ” ಎಂದಷ್ಟೇ ಉತ್ತರಿಸಿದರು.

ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ನೀಡಲು ಶಿವಕುಮಾರ್ ಅವರು ಹಿಂದೇಟು ಹಾಕಿದರು ಎನ್ನುವ ಬಗ್ಗೆ ಕೇಳಿದಾಗ “ನಾನು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ತಕ್ಷಣ ಇನ್ನೊಂದು ಚುನಾವಣೆಗೆ ನಿಂತರೆ, ಜನರಿಗೆ ಒಳ್ಳೆಯ ಸಂದೇಶ ನೀಡಿದಂತೆ ಆಗುವುದಿಲ್ಲ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೈಕಮಾಂಡ್ ಗೆ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಅನೇಕ ಕಾರ್ಯಕರ್ತರು ನಾನೇ ನಿಲ್ಲಬೇಕು ಎಂದು ಹೇಳಿದರು. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ” ಎಂದರು.

ಅಭ್ಯರ್ಥಿಗಳ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು

ಯೋಗೇಶ್ವರ್ ಅವರು ಪಕ್ಷದಲ್ಲಿ ಮೂರು ವರ್ಷ ದುಡಿದ ನಂತರ ಟಿಕೆಟ್ ನೀಡಿ ಎನ್ನುವ ಕಾರ್ಯಕರ್ತರ ಹೇಳಿಕೆಗಳ ಬಗ್ಗೆ ಕೇಳಿದಾಗ, “ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವುಗಳು, ಮುಖಂಡರು, ಕಾರ್ಯಕರ್ತರಾದಿಯಾಗಿ ಎಲ್ಲರೂ ಪಕ್ಷ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ. ನಾಮಪತ್ರ ಸಲ್ಲಿಕೆಯಾದ ನಂತರ ಎಲ್ಲರ ಬಳಿಯೂ ನಾನೇ ಖುದ್ದಾಗಿ ಮಾತನಾಡುತ್ತೇನೆ” ಎಂದರು.

ಆಕಾಂಕ್ಷಿಗಳ ಪಟ್ಟಿ ದೆಹಲಿಗೆ

ಶಿಗ್ಗಾಂವಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹೊರತಾಗಿ ಬೇರೆಯವರನ್ನು ಘೋಷಣೆ ಮಾಡಲಾಗುತ್ತದೆಯೇ ಎಂದು ಕೇಳಿದಾಗ, “ಇದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ಕ್ರೀನಿಂಗ್ ಕಮಿಟಿಯವರು ಈಗಾಗಲೇ ನಾಲ್ಕರಿಂದ ಐದು ಜನ ಆಕಾಂಕ್ಷಿಗಳ ಹೆಸರನ್ನು ದೆಹಲಿಗೆ ಕಳಿಸಿರಬಹುದು. ಮಾಜಿ ಮುಖ್ಯಮಂತ್ರಿ ಕ್ಷೇತ್ರವಾಗಿರುವುದರಿಂದ, ಗೆಲ್ಲುವಂತಹ ಪ್ರಭಾವಿ ವ್ಯಕ್ತಿಗೆ ಟಿಕೆಟ್ ನೀಡಬಹುದು” ಎಂದರು.

ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎನ್ನುವ ಸಚಿವ ಜಮೀರ್ ಅವರ ಬಹಿರಂಗ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರತಿ ಬಾರಿಯೂ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗುತ್ತಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಉಸ್ತುವಾರಿಯನ್ನು ಜಮೀರ್ ಅವರಿಗೆ ಹೈಕಮಾಂಡ್ ನೀಡಿರುವುದರಿಂದ ಹಾಗೂ ಅವರು ಸಹ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಈ ರೀತಿಯ ಬೇಡಿಕೆ ಇಡುವುದು ಸಹಜ” ಎಂದರು.

ಒಮ್ಮತದ ಅಭ್ಯರ್ಥಿ ಘೋಷಣೆ

ಶಿಗ್ಗಾಂವಿಯಲ್ಲಿ ಟಿಕೆಟ್ ಹಂಚಿಕೆ ಗೊಂದಲದ ಬಗ್ಗೆ ಕೇಳಿದಾಗ “ಈ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಬೇರೆಯವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಲ್ಲಾ ಸಮಾಜದವರ ಬಳಿ ಮಾತನಾಡಿ ಒಮ್ಮತದ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎನ್ನುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ” ಎಂದರು.

ಮುಸ್ಲಿಮರಿಗೆ ಪ್ರತಿ ಬಾರಿಯೂ ಟಿಕೆಟ್ ನೀಡುತ್ತಿರುವುದರಿಂದ ಸೋಲಾಗುತ್ತಿದೆ. ಈ ಬಾರಿ ಹಿಂದುಗಳಿಗೆ ಟಿಕೆಟ್ ನೀಡಿ ಎನ್ನುವ ಕೂಗಿನ ಬಗ್ಗೆ ಕೇಳಿದಾಗ “ಇದರ ಬಗ್ಗೆ ತಿಳಿದಿಲ್ಲ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button