
ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಿ.ಟಿ ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಸಚಿವರು ತಮ್ಮ ವರಸೆ ಬದಲಿಸಿದಂತಿದೆ.
ರಾಜೀನಾಮೆ ಕುರಿತು ಮಾತನಾಡಿರುವ ಸಿ.ಟಿ ರವಿ, ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಎಂಬ ಅಲಿಖಿತ ನಿಯಮವಿದೆ. ಇದೇ ರೀತಿ 75 ವರ್ಷ ದಾಟಿದವರು ಅಧಿಕಾರ, ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂಬ ನಿಯಮವೂ ಇದೆ. ಆದರೆ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಸ್ಥಾನ ಎಂಬ ನಿಯಮವಿರುವುದರಿಂದ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ರಾಜೀನಾಮೆ ಪತ್ರ ರೆಡಿಮಾಡಿ ಇಟ್ಟುಕೊಂಡಿದ್ದೇನೆ. ಪಕ್ಷ ಸೂಚಿಸಿದ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಆದರೆ ಇದೀಗ ಸಿ.ಟಿ ರವಿ ಹೇಳಿಕೆ ನೋಡಿದರೆ ಸಚಿವ ಸ್ಥಾನ ಬಿಡಲು ಮನಸ್ಸಿದ್ದಂತೆ ಇಲ್ಲ ಎನ್ನಲಾಗಿದೆ.