ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಮೂಲಕ ಸಿಎಎ ಕಾನೂನನ್ನು ಸುಪ್ರೀಂನಲ್ಲಿ ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ.
ಕೇರಳ ವಿಧಾನಸಭೆ ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.
ಕೇರಳ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಷ್ಟ್ರವನ್ನು ಕೋಮುವಾದಿಗಳಂತೆ ವಿಭಜನೆ ಮಾಡುವ ಆರ್ ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದು ಆರೋಪಿಸಿದ್ದರು. ಸಿಎಎ ಹೆಸರಿನಲ್ಲಿ ಕೇರಳದಲ್ಲಿ ಯಾವುದೇ ಕಾನೂನು ಅಸ್ಥಿತ್ವಕ್ಕೆ ಬರುವುದಿಲ್ಲ. ಕೇರಳ ರಾಜ್ಯಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ಗ್ರೀಕರು, ರೋಮನ್ನರು, ಅರಬ್ಬರು ಎಲ್ಲರೂ ನಮ್ಮ ಭೂಮಿಯನ್ನು ತಲುಪಿದರು. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಆರಂಭದಲ್ಲಿಯೇ ಕೇರಳವನ್ನು ತಲುಪಿದ್ದರು. ನಮ್ಮ ಸಂಪ್ರದಾಯ ಎಲ್ಲರನ್ನೂ ಒಳಗೊಳ್ಳುತ್ತದೆ. ನಮ್ಮ ವಿಧಾನಸಭೆ ಎಲ್ಲಾ ಸಂಪ್ರದಾಯವನ್ನು ಜೀವಂತವಾಗಿರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಈಗ ಅಂತಿಮಾವಾಗಿ ಸಿಎಎ ಕಾನೂನು ಆಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಪಿಣರಾಯೊ ವಿಜಯನ್ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ