ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಾದರೂ ಮಂತ್ರಿ ಸ್ಥಾನ ಪಡೆದುಕೊಳ್ಳಲೇ ಬೇಕು ಎಂದು ನಿರ್ಧರಿಸಿರುವ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ವರಿಷ್ಠರ ಬಳಿ ತೀವ್ರ ಲಾಬಿ ನಡೆಸಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ರಮೇಶ್ ಜಾರಕಿಹೊಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ತಂದುಕೊಟ್ಟಿದ್ದು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬೆಳಗಾವಿಯ 18 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಪ್ರಯತ್ನಿಸುವುದಾಗಿ ತಿಳಿಸಿರುವ ರಮೇಶ್, ಕೊಟ್ಟ ಮಾತಿನಂತೆ ಈ ಬಾರಿಯಾದರೂ ಸಚಿವ ಸ್ಥಾನ ನೀಡುವುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸರಕಾರ ರಾಜ್ಯದಲ್ಲಿ ಸ್ಥಾಪನೆಯಾಗಲು ಪ್ರಮುಖ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದಾಗಿ ಸಚಿವಸ್ಥಾನ ಕಳೆದುಕೊಳ್ಳಬೇಕಾಯಿತು. ಸಿಡಿ ಪ್ರಕರಣ ಬೇಗ ಇತ್ಯರ್ಥವಾಗಿ ಮರಳಿ ಸಂಪುಟಕ್ಕೆ ಸೇರಬಹುದು ಎನ್ನುವ ನಿರೀಕ್ಷೆ ಕೂಡ ಕೈಗೂಡಲಿಲ್ಲ. ಕೊನೆಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗಾದರೂ ಸಂಪುಟದಲ್ಲಿ ಸ್ಥಾನ ನೀಡಿ ಎನ್ನುವ ಬೇಡಿಕೆಯೂ ಈಡೇರಲಿಲ್ಲ.
ಹಾಗಾಗಿ ಈ ಬಾರಿ ಬಿಜೆಪಿ ವರಿಷ್ಠರನ್ನು ಹಾಗೂ ಆರ್ ಎಸ್ಎಸ್ ಮುಖಂಡರನ್ನು ಭೇಟಿಯಾಗಿ ಮನವೊಲಿಸಿ ಎಲ್ಲವನ್ನೂ ವಿವರಿಸುವ ಕೆಲಸವನ್ನು ರಮೇಶ ಜಾರಕಿಹೊಳಿ ಮಾಡುತ್ತಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಈ ಬಾರಿ ಸಚಿವಸಂಪುಟಕ್ಕೆ ಅವರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತು ಅವರ ಅಭಿಮಾನಿಗಳಿದ್ದಾರೆ.
ಶಿಕ್ಷಣ ಕ್ಷೇತ್ರದ 20ಕ್ಕೂ ಹೆಚ್ಚು ಸಮಸ್ಯೆ; ಸೋಮವಾರ ಮಹತ್ವದ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ