ಕೋವಿಡ್ ಅಕ್ರಮ – ಭ್ರಷ್ಟಾಚಾರ ತನಿಖೆಗೆ ಹೊಸ ಎಸ್.ಐ.ಟಿ – ಎಚ್.ಕೆ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರವು ವಿಚಾರಣಾ ಆಯೋಗಗಳ ಕಾಯ್ದೆ 1952ರನ್ವಯ “ಕೋವಿಡ್ ಭ್ರಷ್ಟಾಚಾರದ” ಕುರಿತು ಸತ್ಯ ಶೋಧನೆಗಾಗಿ ಜಸ್ಟೀಸ್ ಜಾನ್ ಮೈಕಲ್ ಕುನ್ಹಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು.
ಈ ಆಯೋಗ ತನ್ನ ಕಾರ್ಯ ಅವಧಿಯಲ್ಲಿ ತನಖೆ ನಡೆಸಿ 2 ಮಧ್ಯಂತರ ವರದಿಗಳನ್ನು ನೀಡಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು, ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರ, ಜನರ ಜೀವಗಳ ಜೊತೆ ಚೆಲ್ಲಾಟವಾಡಿದ ಅಮಾನವೀಯ ಘಟನೆಗಳ ಬಗ್ಗೆ ಸತ್ಯ ಸಂಶೋಧನೆ ನಡೆಸಿರುವ ಆಯೋಗದ ವರದಿಯ ಆಧಾರದ ಮೇಲೆ ಮುಂದುವರೆದ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವೊಂದನ್ನು ನೇಮಕ ಮಾಡಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ತಿಳಿಸಿದರು.
ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ತನಿಖಾ ವರದಿಯ ನಂತರ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಅಧಿಕಾರಿಗಳು ಅಧಿಕಾರಸ್ಥ ರಾಜಕಾರಣಿಗಳ ಅಪವಿತ್ರ ಮೈತ್ರಿಯ ಫಲವಾಗಿ ನಡೆದ ಭ್ರಷ್ಟಾಚಾರ, ಹಗರಣಗಳ ಕುರಿತು ಸತ್ಯಾಂಶಗಳು ಲಭ್ಯವಾಗಿದ್ದವು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಕೋವಿಡ್ 19 ರ ಕಾರಣಗಳಿಂದ ಜಗತ್ತಿನಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲವಾಯಿತು. ಆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದುರಂತವನ್ನು ಅನುಭವಿಸಿತು. ಜನರ ರಕ್ಷಣೆ ಮಾಡಬೇಕಾದಂತಹ ಸಂದರ್ಭದಲ್ಲಿ ಭ್ರಷ್ಟಾಚಾರ, ಬೇಜವಾಬ್ದಾರಿ, ಜನರಿಗೆ ಮೋಸ ವಿಷಯಗಳ ಮಾಹಿತಿಗಳನ್ನು ಬಚ್ಚಿಟ್ಟುಕೊಳ್ಳುವ ಮತ್ತು ಸರ್ಕಾರದ ದಾಖಲೆಗಳು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗದಂತೆ ಮಾಡುವುದು ಮುಂತಾದವುಗಳನ್ನು ಅಂದಿನ ಸರ್ಕಾರ ಕೈಗೊಂಡಿತ್ತು. ಸಾರ್ವಜನಿಕರ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಮಹತ್ವದ ಘಟನೆಗಳು ನಡೆದು ಹೋದವು. ಶಾಸನಬದ್ಧ ಸಮಿತಿಗಳ ಕಾರ್ಯನಿರ್ವಹಣೆಯನ್ನು ಅಸಾಧ್ಯವೆನ್ನುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡಲಾಯಿತು ಮತ್ತು ಕಡಿವಾಣ ಹಾಕಲಾಗಿತ್ತು. ಸಮಿತಿಗಳ ಕಾರ್ಯನಿರ್ವಹಣೆಯನ್ನು ತಡೆದು ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು.
ಕೋರೋನಾ ಸಂದರ್ಭದಲ್ಲಿ 330 ರಿಂದ 400 ರೂ ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್ ಗಳನ್ನು 2117 ರೂ.ಗೆ ಖರೀದಿಸಲಾಯಿತು. 3 ಲಕ್ಷ ಕಿಟ್ ಖರಿದಿಸಲಾಯಿತು. ಆಮದು ಸಾಗಣೆ ವೆಚ್ಚ ನೀಡಿ ಅನುಮಾನಾಸ್ಪದ ವೆಚ್ಚ ಮಾಡಲಾಯಿತು. ಚೀನಾ ಕಂಪನಿಗಳಿಗೆ ಲಾಭ ಮಾಡಿಕೊಡಲಾಯಿತು. ಒಂದೇ ದಿನ ಎರಡು ದರಗಳಲ್ಲಿ 2117.53 ಹಾಗು 2104 ರೂ ಗೆ ಖರೀದಿ ಮಾಡಲಾಯಿತು. ಅದೇ ದಿನ 2049 ರೂ ಗಳಂತೆ ಇನ್ನೊಂದು ಕಂಪನಿಯಿಂದ ಖರೀದಿಸಲಾಯಿತು. ನ್ಯಾ. ಮೈಕಲ್ ಡಿ ಕುನ್ಹಾ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಅಕ್ರಮದ ಉಲ್ಲೇಖ ನಿಯಮ ಬಾಹಿರವಾಗಿ ಖಾಸಗಿ ಲ್ಯಾಬ್ಗಳಿಗೆ 6.93 ಕೋಟಿ ಸಂದಾಯದ ಪ್ರಸ್ತಾಪ, ಖಾಸಗಿ ಲ್ಯಾಬ್ಗಳಿಗೆ ನಿಯಮ ಬಾಹಿರವಾಗಿ ಹಣ ಸಂದಾಯವಾದ ಆರೋಪ ಐಸಿಎಂಆರ್ ಮಾನ್ಯತೆ ಇಲ್ಲದ ಲ್ಯಾಬ್ಗಳಿಗೆ ಹಣ ಸಂದಾಯ ಮಾಡಿದ ಉಲ್ಲೇಖ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಹಣ ಸಂದಾಯ ಮಾಡಿರುವುದಕ್ಕೆ ಆಕ್ಷೇಪ, 8 ಲ್ಯಾಬ್ಗಳಿಗೆ 4 ಕೋಟಿ 28 ಲಕ್ಷ ಸಂದಾಯ ಮಾಡಲಾಗಿದೆ ಅಂತ ವರದಿಯಲ್ಲಿ ಪ್ರಸ್ತಾಪ, ಒಪ್ಪಂದ ಮಾಡಿಕೊಳ್ಳದೆ ಲ್ಯಾಬ್ಗಳಿಗೆ ಬೇಕಾಬಿಟ್ಟಿ ಹಣ ಸಂದಾಯ ಮಾಡಿರುವುದಕ್ಕೆ ಆಯೋಗ ತರಾಟೆ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ಪ್ರಚಾರಕ್ಕಾಗಿ ಇಟ್ಟಿದ್ದ 7 ಕೋಟಿ 3 ಲಕ್ಷ ಹಣದಲ್ಲೂ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಉಲ್ಲೇಖ ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ 8 ಲಕ್ಷ 85 ಸಾವಿರ ನಿಯಮ ಬಾಹಿರವಾಗಿ ಪಾವತಿ ಕೆಲವು ಏಜೆನ್ಸಿಗಳಿಗೆ ಹಣ ಪಾವತಿಸಿದ್ದ ಬಗ್ಗೆ ದಾಖಲೆಯೇ ಇಡದ ಆರೋಗ್ಯ ಇಲಾಖೆ 5 ಕೋಟಿ ರೂ. ಹಣದ ಬಗ್ಗೆ ದಾಖಲೆ ಒದಗಿಸಲಿಲ್ಲ.
ಸಾವಿನ ಬಗ್ಗೆ ಸರಿಯಾಗಿ ಲೆಕ್ಕ ಕೊಡದೇ ಸಾವಿನ ಲೆಕ್ಕ ಪರಿಶೋಧನೆ ನಡೆಸದೇ ನೈಜವಾದ ಸಾವಿನ ಸಂಖ್ಯೆಗಳನ್ನು ಬಚ್ಚಿಟ್ಟ ಸರ್ಕಾರ ನ್ಯಾಯಯುತವಾದ ಯಾವುದೇ ಕ್ರಮ ಕೈಗೊಳ್ಳದೇ ಜನರಿಗೆ ಮೋಸ ಎಸಗಿ, ಅವ್ಯವಹಾರದಲ್ಲಿ ತೊಡಗಿತ್ತು ಎಂದು ಸಚಿವರು ವಿವರಿಸಿದರು. ಈ ಎಲ್ಲಾ ಅವ್ಯವಹಾರ ಕ್ರಮಗಳಲ್ಲಿ ಅಪರಾಧಿ ಅಂಶಗಳನ್ನು ತನಿಖೆ ಮಾಡಿ ಎಫ್.ಐ.ಆರ್, ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಶಿಕ್ಷೆಗೆ ಅಭಿಯೋಜನೆಗೆ ಒಳಪಡಿಸುವ ಮೂಲಕ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಚಿವರು ವಿವರಿಸಿದರು.
ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ:
ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಿ.ಬಿ.ಐ.ಗೆ ವಹಿಸಿದ್ದರೂ ತನಿಖೆಗೆ ನಿರಾಕರಿಸಿದ ಪ್ರಕರಣಗಳು ಎಸ್.ಐ.ಟಿ.ಗೆ
ಬೆಂಗಳೂರು: ಸಿ.ಬಿ.ಐ ತನಿಖೆಗೆ ವಹಿಸಿದ 09 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ 06 ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲವೆಂದು ಸಿ.ಬಿ.ಐ ತಿಳಿಸಿರುವ 06 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ತಿಳಿಸಿದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ವಿವರಿಸಿದರು.
ಅಕ್ರಮ ಗಣಿಗಾರಿಕೆ ಎಲ್ಲಾ ಪ್ರಕರಣಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಕರಣಗಳ ತನಿಖೆ ಕುರಿತ ವಿವರಗಳನ್ನು ಮಂಡಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಣಯಿಸಲಾಗುವುದು ಎಂದು ಸಚಿವರು ವಿವರಿಸಿದರು.
ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಅಕ್ರಮ ಗಣಿಗಾರಿಕೆ ಕಷ್ಟವುಂಟು ಮಾಡಿದ ʼಸಿʼ ವರ್ಗದ 10 ಗಣಿ ಗುತ್ತಿಗೆದಾರರ ಪ್ರಕರಣಗಳನ್ನು ಸಹ ಈಗಿನ ಎಸ್.ಐ.ಟಿ ತನಿಖೆಗೆ ವಹಿಸಲು ನಿರ್ಣಯಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮೆ|| ಮೈಸೂರು ಮ್ಯಾಂಗನೀಸ್ ಕಂಪನಿ, ಮೆ|| ಎಂ.ದಶರಥ ರಾಮಿ ರೆಡ್ಡಿ, ಮೆ|| ಅಲ್ಲಂ ವೀರಭದ್ರಪ್ಪ, ಮೆ|| ಕರ್ನಾಟಕ ಲಿಂಪೊ, ಮೆ|| ಅಂಜನಾ ಮಿನರಲ್ಸ್, ಮೆ|| ರಾಜೀಯ ಖಾನುಂ, ಮೆ|| ಮಿಲನ ಮಿನರಲ್ಸ್ (ಮಹಾಲಕ್ಷಿ & ಕಂ), ಮೆ|| ಎಂ.ಶ್ರೀನಿವಾಸುಲು, ಮೆ|| ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ ಮತ್ತು ಮೆ|| ಜಿ.ರಾಯಶೇಖರ್ ಕಂಪನಿಗಳು ಅಕ್ರಮ ಗಣಿಗಾರಿಕೆಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಹೊಂಡಗಳು ಮತ್ತು ಮಂಜೂರಾದ ಗುತ್ತಿಗೆಗಿಂತ ಹೆಚ್ಚು ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಮತ್ತು ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಲ್ಲಿ ತೊಡಗಿರುವ ಗುತ್ತಿಗೆಗಳು ಮತ್ತು ಇತರೆ ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ಮೇಲ್ಕಂಡ ಕಂಪನಿಗಳ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂಬಂಧ ಮಾನ್ಯ ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಚಿವರು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ