ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಮುಂದಿನ ಮೂರುವರೆ ವರ್ಷ ಸ್ಥಿರ ಹಾಗೂ ಸ್ವಚ್ಛ ಆಡಳಿತ ನಡೆಸಲು ಈ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಿಗೆ ಶಕ್ತಿ ತುಂಬಲು ರಮೇಶ ಜಾರಕಿಹೊಳಿ ಅವರನ್ನು ವಿಧಾನ ಸಭೆಗೆ ಆಯ್ಕೆ ಮಾಡಿ ಜನಸೇವೆಗೆ ಅವಕಾಶ ಮಾಡಿಕೊಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕೋರಿದರು.
ಸಮೀಪದ ಧುಪದಾಳ ಗ್ರಾಮದಲ್ಲಿ ಗುರುವಾರದಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಆರಿಸಿ ಕಳುಹಿಸಿದರೆ ಇಡೀ ಬೆಳಗಾವಿ ಜಿಲ್ಲೆಗೆ ದೊಡ್ಡ ಶಕ್ತಿ ಸಿಗುತ್ತದೆ ಎಂದು ಹೇಳಿದರು.
ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಎಲ್ಲ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದಾರೆ. ಬಡಕುಟುಂಬಗಳಿಗೆ ಉಜ್ವಲ ಎಲ್‌ಪಿಜಿ ಗ್ಯಾಸ್‌ಗಳನ್ನು ನೀಡಿದ್ದಾರೆ. ರೈತರಿಗೆ ೬ಸಾವಿರ ರೂ.ಗಳನ್ನು ಸಹಾಯಧನ ನೀಡುತ್ತಿದ್ದಾರೆ.
ಆಯುಷ್ಮಾನ್ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ೫ ಲಕ್ಷ ರೂ. ನೀಡುತ್ತಿದ್ದಾರೆ. ಮಹಿಳೆಯರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿಯೂ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ.
ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿಗಳಿಗೆ ಬೈಸಿಕಲ್ ಸೇರಿದಂತೆ ಅನೇಕ ಪ್ರಗತಿಪರ ಯೋಜನೆಗಳನ್ನು ರೂಪಿಸಿದೆ.ಯಡಿಯೂರಪ್ಪನವರ ಕೈ ಬಲಪಡಿಸಲು ಗೋಕಾಕ ಮಾದರಿ ಕ್ಷೇತ್ರವನ್ನಾಗಿ ಮಾಡಲು ರಮೇಶ ಜಾರಕಿಹೊಳಿ ಅವರನ್ನು ಭಾರೀ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿದರು.
ಗೋಕಾಕ ಉಸ್ತುವಾರಿ ಮತ್ತು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಜೆಡಿಎಸ್,ಕಾಂಗ್ರೇಸ್ ಮೈತ್ರಿ ಸರ್ಕಾರ ಜಗಳದಲ್ಲಿಯೇ ಕಾಲಹರಣ ಮಾಡಿತು. ರಾಜ್ಯದ ಅಭಿವೃದ್ಧಿ ಕುಂಠಿತಗೊಂಡವು.ರಮೇಶ ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿ ಸ್ಥಾನವನ್ನು ತ್ಯಜಿಸಿ ನಮ್ಮ ಯಡಿಯೂರಪ್ಪನವರಿಗೆ ಬಲ ತುಂಬಲು,ರಾಜ್ಯದಲ್ಲಿ ಕಮಲ ಅರಳಲು ಬಿಜೆಪಿಗೆ ಸೇರ್ಪಡೆಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ.
ಸ್ವಾಭಿಮಾನಿಯಾಗಿರುವ ರಮೇಶ ಅವರನ್ನು ಈ ಭಾಗದ ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಗೋಕಾಕ ಕ್ಷೇತ್ರದ ಏಳ್ಗೆಗಾಗಿ ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ: ವಿಶ್ವನಾಥ ಪಾಟೀಲ, ಶಾಮಾನಂದ ಪೂಜಾರಿ, ಸುಧೀರ ಜೋಡಟ್ಟಿ, ಲಕ್ಷ್ಮಣ ತಪಸಿ, ಡಿ.ಎಂ.ದಳವಾಯಿ, ಎಸ್.ಐ.ಬೆಣವಾಡೆ, ಗೋವಿಂದ ಕೊಪ್ಪದ, ಸುಭಾಸ ಪಾಟೀಲ,ಶೇಖರಸಿಂಗ್ ರಜಪೂತ ಮುಂತಾದವರು ಉಪಸ್ಥಿತರಿದ್ದರು.
ನಂತರ ಸಚಿವೆ ಶಶಿಕಲಾ ಜೊಲ್ಲೆಯವರು ಶಿಂದಿಕುರಬೇಟ, ಪಾಮಲದಿನ್ನಿ, ಮಲ್ಲಾಪೂರ ಪಿಜಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ರಮೇಶ ಜಾರಕಿಹೊಳಿ ಪರ ಮತಯಾಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ