Latest

*ಬಡವರಿಗೂ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್*

ಪುನೀತ್ ಹೃದಯಜ್ಯೋತಿ ಯೋಜನೆ: ಹಠಾತ್ ಹೃದಯಾಘಾತ ಚಿಕಿತ್ಸೆಗೆ ಒಟ್ಟು 86 ಉಪಕರಣಗಳು ಲಭ್ಯ

ಪ್ರಹತಿವಾಹಿನಿ ಸುದ್ದಿ: ಬೆಳಗಾವಿ ಸುವರ್ಣಸೌಧ: ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ವಿವಿಧ ಬಗೆಯ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆಯಡಿ, ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಬಡತನ ರೇಖೆಗಿಂತ ಕಡಿಮೆ (BPL) ಇರುವ ಕುಟುಂಬಗಳಿಗೆ Ab-Ark (ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ) ಯೋಜನೆಯಡಿಯಲ್ಲಿ ರೂ.5.00 ಲಕ್ಷದವರೆಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಬಡತನ ರೇಖೆಗಿಂತ ಮೇಲಿರುವ (APL) ಕುಟುಂಬಗಳಿಗೆ ರಿಯಾಯಿತಿ ಅಂದರೆ 30% ಸರ್ಕಾರದ ಅಡಿಯಿಂದ ಮತ್ತು 70% ರೋಗಿಗಳಿಂದ ಪಡೆದು ಚಿಕಿತ್ಸೆಗಾಗಿ ಭರಿಸಲಾಗುತ್ತದೆ.

ಇದಲ್ಲದೇ SCP and TSP ಯೋಜನೆ ಅಡಿಯಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತದೆ (Rare Disease) ಯೋಜನೆಯಡಿಯಲ್ಲಿ ದುಬಾರಿ ಚಿಕಿತ್ಸೆಗಳಾದ ರೋಬೋಟಿಕ್ ಶಸ್ತ್ರಚಿಕಿತ್ಸೆ, ಅಸ್ಥಿಮಜ್ಜೆ (Bone Marrow) ಹಾಗೂ ಬಡತನ ರೇಖೆಗಿಂತ ಕಡಿಮೆ (BPL) ಇರುವ ಕುಟುಂಬಗಳಿಗೆ ಕ್ಯಾನ್ಸರ್ ತಪಾಸಣೆಗೆ PET-SCANಅನ್ನು ಸಂಪೂರ್ಣ ಉಚಿತವಾಗಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ನೀಡಲಾಗುತ್ತಿದೆ.

ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಾಜ್ಯದಾದ್ಯಂತ 31 ಜಿಲ್ಲಾ ಆಸ್ಪತ್ರೆಗಳಲ್ಲಿ ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಶ್ರೀ ಪುನೀತ್ ಹೃದಯಜ್ಯೋತಿ ಯೋಜನೆಯಡಿ Hub and Spoke ಮಾದರಿಯಲ್ಲಿ 16 ಜಿಲ್ಲಾ ಆಸ್ಪತ್ರೆಗಳು ಮತ್ತು 70 ತಾಲ್ಲೂಕು ಆಸ್ಪತ್ರೆಗಳಲಿ ಹಠಾತ್ ಹೃದಯಾಘಾತ ಚಿಕಿತ್ಸೆಗೆ ಒಟ್ಟು 86 ಉಪಕರಣಗಳು ಲಭ್ಯವಿದೆ.

ರಾಜ್ಯದಾದ್ಯಂತ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ 193 ಕೇಂದ್ರಗಳಲ್ಲಿ ಒಟ್ಟು 763 ಡಯಾಲಿಸಿಸ್ ಯಂತ್ರಗಳು ಲಭ್ಯವಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದಿಂದ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆವಾರು ಆಸ್ಪತ್ರೆಗಳ ನಿರ್ಮಾಣ ಹಾಗೂ ದುರಸ್ತಿಗೆ 67084.35 ಲಕ್ಷ ರೂ ಅನುದಾನ ನಿಗದಿಪಡಿಸಿದ್ದು, ಈ ಅನುದಾನವನ್ನು ಆದ್ಯತೆ ಮೇರೆಗೆ ಅವಶ್ಯವಿರುವ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಾದ ಕಟ್ಟಡ, ವಸತಿ, ನೀರು ಹಾಗೂ ಶೌಚಾಲಯ ಮತ್ತಿತರ ಅಭಿವೃದ್ಧಿ ಮತ್ತು ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button