Latest

ಆ್ಯಪಲ್ ಕಂಪನಿಯಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೈವಾನ್ ಮೂಲದ ಆಪಲ್ ಫೋನ್ ಕಂಪೆನಿ ಫಾಕ್ಸ್ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ  ಯಂಗ್ ಲಿಯು ಅವರ ಜೊತೆ ಚರ್ಚೆ ನಡೆಸಿದರು.

 ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ವೇಳೆ  ಫಾಕ್ಸ್ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು  ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು ಮತ್ತು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದರು. 

ಡಿಸಿಎಂ ಡಿ.ಕೆ.ಶಿವಕುಮಾರ್,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ , ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫಾಕ್ಸ್‌ಕಾನ್‌ ಸಂಸ್ಥೆಯ ಚೇರ್‌ಮನ್‌ ಯಂಗ್‌ ಲಿಯು ಅವರೊಂದಿಗಿನ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಅಂಶಗಳು

  1. ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ತಮಗೆ ಮೊದಲನೆಯದ್ದಾಗಿ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಸಾಧನೆಯನ್ನು ಗುರುತಿಸಿ ನೀಡಿರುವ ಈ ಗೌರವದ ಬಗ್ಗೆ ನಾನು ಅತ್ಯಂತ ಸಂತುಷ್ಟನಾಗಿದ್ದೇನೆ.
  2. ಫಾಕ್ಸ್‌ಕಾನ್‌ ಮತ್ತು ರಾಜ್ಯ ಸರ್ಕಾರದ ನಡುವಿನ ಪರಸ್ಪರ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಂದಿನ ಸಭೆಯು ಅತ್ಯುತ್ತಮ ಅವಕಾಶ ಒದಗಿಸಿದೆ. ಈ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪರಸ್ಪರ ಉನ್ನತಿ ಮತ್ತು ಯಶಸ್ಸಿಗೆ ಪೂರಕವಾದ ಈ ಸನ್ನಿವೇಶದ ಭಾಗವಾಗಿರುವುದು ನನಗೆ ಗೌರವದ ವಿಷಯವಾಗಿದೆ.
  3. ಕರ್ನಾಟಕ ರಾಜ್ಯವು ಇಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಡಿಸೈನ್‌ ಮತ್ತು ಮ್ಯಾನುಫ್ಯಾಕ್ಚರಿಂಗ್‌ (ESDM) ವಲಯದ ಶಕ್ತಿ ಕೇಂದ್ರವಾಗಿದೆ. ESDM ಕ್ಷೇತ್ರದ ಹಲವು ಪ್ರಮುಖ ಉತ್ಪಾದಕರು ರಾಜ್ಯದಲ್ಲಿ ಕಾರ್ಯಾಚರಿಸುತ್ತಿದ್ದು, ರಾಜ್ಯವು ಇಲೆಕ್ಟ್ರಾನಿಕ್ಸ್‌ ಕ್ಷೇತ್ರದ ಉತ್ಪಾದನೆ ಮತ್ತು ರಫ್ತಿನಲ್ಲಿ ದೇಶದಲ್ಲೇ ಪ್ರಮುಖ ಕೊಡುಗೆ ನೀಡುತ್ತಿರುವುದು ಹೆಮ್ಮೆ ಮೂಡಿಸಿದೆ.
  4. ಇಲೆಕ್ಟ್ರಾನಿಕ್‌ ಉತ್ಪಾದನಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಗೆ ನೆರವು ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಹಲವು ಪೂರಕ ಅಂಶಗಳನ್ನು ಒದಗಿಸುತ್ತಿದೆ. ಪರಿಣಾಮಕಾರಿ ಸಾಗಾಟ ವ್ಯವಸ್ಥೆ, ನಿರಂತರ ವಿದ್ಯುತ್‌ ಪೂರೈಕೆ, ಕೌಶಲ್ಯ ಹೊಂದಿದ ಕಾರ್ಯಪಡೆ, ಉತ್ತಮ ಮಾರಾಟ ವ್ಯವಸ್ಥೆ ಮತ್ತು ಈ ಉದ್ಯಮದ ಅಗತ್ಯಗಳನ್ನು ಪೂರೈಸುವಂತಹ ಮೂಲಸೌಲಭ್ಯಗಳನ್ನು ರಾಜ್ಯ ಹೊಂದಿದೆ.
  5. ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ತಮ್ಮ ಯೋಜನೆಯಿಂದ ಇಲ್ಲಿ ಉದ್ಯೋಗದ ಉತ್ತಮ ಅವಕಾಶಗಳು ಸೃಷ್ಟಿಯಾಗಲಿದೆ. ಇದು ಸ್ಥಳೀಯ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಮಾತ್ರವಲ್ಲದೆ, ಸ್ಥಳೀಯ ಕೆಲಸಗಾರರನ್ನು ಇನ್ನಷ್ಟು ಸಬಲಗೊಳಿಸಿ, ಈ ವಲಯದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಹೇಳಲು ಸಂತಸವೆನಿಸುತ್ತದೆ.
  6. ಈ ನಿಟ್ಟಿನಲ್ಲಿ ಫಾಕ್ಸ್‌ಕಾನ್‌ಗೆ ಅಗತ್ಯವಾದ ಎಲ್ಲಾ ನೆರವು ಒದಗಿಸುವುದನ್ನು ನಾನು ಖಾತ್ರಿಪಡಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button