Belagavi NewsBelgaum NewsKarnataka News

*ನಂದಗಡ ಐತಿಹಾಸಿಕ ಕೆರೆಗೆ ಕೊಳಚೆ ನೀರು ಸೇರದಂತೆ ಕಾಮಗಾರಿ ಕೈಗೊಳ್ಳಿ : ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಸಮಾಧಿ ಸ್ಥಳದ ಸಮೀಪದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಂಬಾರ ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.  

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಂಬಾರ ಕೆರೆಯ ಅಭಿವೃದ್ಧಿಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತದೆ. ಜಿಲ್ಲಾ ಪಂಚಾಯತ ಹಾಗೂ ಗ್ರಾಮ ಪಂಚಾಯತ ವತಿಯಿಂದ ಕೆರೆಯ ಸುತ್ತಲಿನ ಚರಂಡಿ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ದ್ರವ ತ್ಯಾಜ್ಯ ನಿರ್ವಹಣಾ (LWM) ಯೋಜನೆಯಡಿ ಕಾಮಗಾರಿಯನ್ನು ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತ 15ನೇ ಹಣಕಾಸು, ಸ್ವ-ಸಂಪನ್ಮೂಲ ಹಾಗೂ ಇನ್ನಿತರ ಯೋಜನೆಗಳಡಿ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ಕೈಗೊಳ್ಳಿ. ಚರಂಡಿ ನೀರು ಅಥವಾ ಬೂದು ನೀರು ಕೆರೆಗೆ ಸೇರದಂತೆ ವ್ಯವಸ್ಥೆ ಮಾಡಿ ಎಂದು ನಿರ್ದೇಶನ ನೀಡಿದರು. 

ಕೆರೆಯ ಮಾಹಿತಿ

ಕೆರೆಯ ಐತಿಹಾಸಿಕ ಹಿನ್ನೆಲೆ, ಕೆರೆಯಲ್ಲಿ ಪ್ರಸ್ತುತ ಕೈಗೊಳ್ಳಲಾಗಿರುವ ಕಾಮಗಾರಿ ಹಾಗೂ ಮತ್ತೆ ಏನೇನು ಕಾಮಗಾರಿ ಕೈಗೊಳ್ಳಬಹುದು ಎಂಬುದರ ಮಾಹಿತಿಯನ್ನು ಸಹಾಯಕ ನಿರ್ದೇಶಕ (ಪಂ ರಾಜ್) ಗಣೇಶ ಕೆ.ಎಸ್. ಮತ್ತು ಪ್ರೊಜೆಕ್ಟ್ ಅಸೋಸಿಯೇಟ್ ಓಂಕಾರ ಕೋರಿ ಸಭೆಯಲ್ಲಿ ಪ್ರಸ್ತುತಪಡಿಸಿದರು. ಜೊತೆಗೆ ಜಿಪಂ, ತಾಪಂ ಅಧಿಕಾರಿಗಳು ಹಾಗೂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ವಿವಿಧ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಕೆರೆಯ ಟೋಪೋಗ್ರಾಫಿ ಸರ್ವೇ ಕೈಗೊಂಡು ಮತ್ತೊಮ್ಮೆ ವರದಿ ಸಲ್ಲಿಸಿ. ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪ್ರಾರಂಭಿಸಿ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ನಿರೂಪಿಸಿದರು. ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಕಾರ್ಯನಿರ್ವಾಹಕ ಅಭಿಯಂತರ (ಪಂಚಾಯತರಾಜ್ ಇಂಜಿನಿಯರಿಂಗ್) ಸುಂದರ ಕೋಳಿ, ಖಾನಾಪೂರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಜಾಧವ, ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಾಗರಕುಮಾರ ಬಿರಾದಾರ, ಸಹಾಯಕ ಅಭಿಯಂತರ ಸುಬ್ರಮಣ್ಯ ಪಾಟೀಲ, ತಾಂತ್ರಿಕ ಸಂಯೋಜಕ ವಿಶ್ವನಾಥ ಹಟ್ಟಿಹೊಳಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button