
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಧ್ಯರಾತ್ರಿಯ ಬಳಿಕವೂ ಸ್ನೇಹಿತರೊಟ್ಟಿಗೆ ಹೋಟೆಲ್ ಒಂದರಲ್ಲಿ ಹರಟೆ
ಹೊಡೆಯುತ್ತ ಕುಳಿತಿದ್ದವರನ್ನು ಹೋಟೆಲ್ ನಿಂದ ಹೊರಹೋಗುವಂತೆ ತಿಳಿಹೇಳಿದ ಪೊಲೀಸ್
ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ
ಸ್ಥಳೀಯ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆಯ ಮಗ ಶ್ರೀಧರ ಬಸವರಾಜ ಅಂಕಲಗಿ ವಿರುದ್ಧ
ಖಾನಾಪುರ ಠಾಣೆಯಲ್ಲಿ ಭಾನುವಾರ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣ
ದಾಖಲಾಗಿದೆ.
ಶನಿವಾರ ರಾತ್ರಿ ಶ್ರೀಧರ ಹಾಗೂ ಆತನ ಕೆಲ ಸ್ನೇಹಿತರು ಬೆಳಗಾವಿ ರಸ್ತೆಯ ಹೋಟೆಲ್
ಒಂದರಲ್ಲಿ ಊಟಕ್ಕೆ ಬಂದಿದ್ದರು. ಊಟ ಮುಗಿದರೂ ಹರಟೆ ಹೊಡೆಯುತ್ತ ಕುಳಿತಿದ್ದ ಇವರನ್ನು
ಹೊರಹೋಗುವಂತೆ ಹೋಟೆಲ್ ಸಿಬ್ಬಂದಿ ತಿಳಿಸಿದ್ದರು. ಆದರೆ ಸಿಬ್ಬಂದಿಯನ್ನು ಗದರಿಸಿ
ತಮ್ಮ ಹರಟೆ ಮುಂದುವರೆಸಿದ್ದರು. ಮಧ್ಯರಾತ್ರಿ 12 ಕಳೆದರೂ ಹೋಟೆಲ್ ಬಿಟ್ಟು ಹೊರಡದ
ಇವರ ಬಗ್ಗೆ ಹೋಟೆಲ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಸುದ್ದಿ ತಿಳಿದು ಹೋಟೆಲ್
ಬಳಿ ಆಗಮಿಸಿದ ರಾತ್ರಿ ಗಸ್ತಿನ ಪೊಲೀಸರಿಗೆ ಶ್ರೀಧರ ಅವಾಚ್ಯವಾಗಿ ನಿಂದಿಸಿದ್ದ.
ಪೊಲೀಸ್ ಗಸ್ತು ಸಿಬ್ಬಂದಿ ನೀಡಿದ ದೂರಿನನ್ವಯ ಶ್ರೀಧರನನ್ನು ಬಂಧಿಸಿ ಸ್ಥಳೀಯ
ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ನ್ಯಾಯಾಧೀಶರ ಸೂಚನೆಯಂತೆ ಬೆಳಗಾವಿಯ ಜಿಲ್ಲಾ
ಕಾರಾಗೃಹಕ್ಕೆ ರವಾನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ