ಹೆಸರಿಗಷ್ಟೇ ಕ್ಯಾಶ್ ಲೆಸ್ : ನೌಕರರ ವೇತನದಲ್ಲೇ ಕಡಿತ !

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ನೌಕರರಿಗೆ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಎನ್ನುವುದು ಕೇವಲ ಹೆಸರಿಗಷ್ಟೇ. ಪ್ರತಿ ತಿಂಗಳು ನೌಕರರ ವೇತನದಿಂದಲೇ ಯೋಜನೆಗಾಗಿ ಹಣ ಕಡಿತವಾಗುತ್ತದೆ.

ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ದೊರೆಯಲಿದೆ ಎಂದು ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ನೌಕರರೂ ಏನೋ ಒಂದಿಷ್ಟು ಆಸರೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕೆಲವೊಂದು ವರ್ಗಗಳನ್ನು ಹೊರತುಪಡಿಸಿ ಸರಕಾರಿ ನೌಕರರಿಗೆಲ್ಲ ಈ ಯೋಜನೆ ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಇದರ ಅಸಲಿಯತ್ತೇ ಬೇರೆ. ಇದೊಂದು ಹೆಲ್ತ್ ಇನ್ಸೂರೆನ್ಸ್ ರೀತಿಯ ಯೋಜನೆ. ಸರಕಾರ ಮಧ್ಯಸ್ಥಿಕೆವಹಿಸಿದೆ ಎನ್ನುವುದನ್ನು ಬಿಟ್ಟರೆ ಇದರಲ್ಲಿ ಏನೇನೂ ಇಲ್ಲ. ಖಾಸಗಿಯಾಗಿ ಇದಕ್ಕಿಂತ ಹೆಚ್ಚಿನ ರೋಗಗಳಿಗೆ, ಇದಕ್ಕಿಂತ ಹೆಚ್ಚಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಆರೋಗ್ಯ ವಿಮೆ ಮಾಡಿಸಲು ಬೇಕಾದಷ್ಟು ಅವಕಾಶಗಳಿವೆ.

ಪ್ರಸ್ತುತ ರಾಜ್ಯ ಸರಕಾರ ತಂದಿರುವ ಯೋಜನೆಯ ಪ್ರಕಾರ ಎ, ಬಿ, ಸಿ, ಡಿ ವರ್ಗದ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ನೌಕರರು ಹಾಗೂ ಅವರ ಕುಟುಂಬಸ್ಥರು ಯಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಹೃದೇರೋಗ, ಕ್ಯಾನ್ಸರ್, ನರರೋಗ, ಗಂಭೀರ ಗಾಯ, ನವಜಾತ ಶಿಶುಗಳ ಶಸ್ತ್ರ ಚಿಕಿತ್ಸೆ ಸೇರಿ ಆಯ್ದ 7 ಮಾರಣಾಂತಿಕ ರೋಗಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಪಡೆಯಬಹುದು. ಕರ್ನಾಟಕದ 182 ಆಸ್ಪತ್ರೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.

ಆರೋಗ್ಯ ಸಂಜೀವಿನಿ ಯೋಜನೆಯ ಅಡಿಯಲ್ಲಿ ಸರಕಾರಿ ನೌಕರರನ್ನು ತರಲು ಸೂಕ್ತ ಯೋಜನೆ ತಯಾರಿಸುವಂತೆ ಸುವರ್ಣ ಕರ್ನಾಟಕ ಆರೋಗ್ಯಟ್ರಸ್ಟ್ ಗೆ ಸೂಚಿಸಲಾಗಿದೆ. ಈಗಾಗಲೆ ಇರುವ ಜ್ಯೋತಿ ಸಂಜೀವಿನಿ ಯೋಜನೆ ರದ್ದಾಗಲಿದೆ.

ಈಗ ಹೊರಬಿದ್ದಿರುವ ಸುತ್ತೋಲೆ ಪ್ರಕಾರ ಪ್ರತಿ ನೌಕರನ ಮೂಲವೇತನದಲ್ಲಿ ಈ ಯೋಜನೆಗಾಗಿ ಶೇ.1ರಷ್ಟು ಪ್ರತಿ ತಿಂಗಳು ಕಡಿತವಾಗಲಿದೆ. ಉದಾಹರಣೆಗೆ 50 ಸಾವಿರ ರೂ. ಮೂಲ ವೇತನ ಇರುವ ನೌಕರನ ಸಂಬಳದಲ್ಲಿ ತಿಂಗಳಿಗೆ 500 ರೂ., ವರ್ಷಕ್ಕೆ 6 ಸಾವಿರ ರೂ. ಕಡಿತ ಮಾಡಲಾಗುತ್ತದೆ.  ರಾಜ್ಯ ಲಕ್ಷಾಂತರ ನೌಕರರ ವೇತನದಲ್ಲಿ ಕಡಿತವಾಗುವ ಹಣವನ್ನು ಸರಕಾರ ಆರೋಗ್ಯ ವಿಮೆಗೆ ಬಳಸಲಿದೆ.

ಈ ಯೋಜನೆ ಜಾರಿ ಘೋಷಣೆಯನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಬಜೆಟ್ ನಲ್ಲೇ ಮಾಡಿದ್ದರು. ಆಗ ಸರಕಾರದ ಬೊಕ್ಕಸದಿಂದ ಯೋಜನೆಗೆ 50 ಕೋಟಿ ರೂ. ವೆಚ್ಚವಾಗಲಿದೆ ಎಂದಿದ್ದರು. ಈಗ ಸುತ್ತೋಲೆ ಹೊರಬಿದ್ದಿದೆ. ಇದರ ಸ್ಪಷ್ಟ ಯೋಜನೆ ತಾಯರಿಸಲು ಸುವರ್ಣ ಕರ್ನಾಟಕದ ಆರೋಗ್ಯ ಟ್ರಸ್ಟ್ ಗೆ 2 ತಿಂಗಳು ಸಮಯಾವಕಾಶ ನೀಡಲಾಗಿದೆ. ಈಗ ಯೋಜನೆಗೆ ಸರಕಾರ 250 ಕೋಟಿ ರೂ. ಭರಿಸುತ್ತದೆ ಎನ್ನಲಾಗುತ್ತಿದೆ. ಯೋಜನೆಯ ಸ್ಪಷ್ಟ ಚಿತ್ರಣ ಇನ್ನಷ್ಟೆ ಹೊರಬೀಳಬೇಕಿದೆ.

15 ದಿನದೊಳಗೆ ಆಧಾರ್ ಕಾರ್ಡ್ ಲಿಂಕ್ ಗೆ ಸಿಎಂ ಬೊಮ್ಮಾಯಿ ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button