
ಪ್ರಗತಿವಾಹಿನಿ ಸುದ್ದಿ: ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಎಐ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ವಿದ್ಯಾಭ್ಯಾಸಗಳಲಿಯೂ ಅಳವಡಿಸಲಾಗುತ್ತಿದೆ.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಮಹತ್ವದ ಹೆಜ್ಜೆಯನ್ನು ಸಿಬಿಎಸ್ಇ ಮತ್ತು ಎನ್ ಸಿಇಆರ್ ಟಿ ಇಟ್ಟಿದೆ. ಇದರ ಭಾಗವಾಗಿ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 20 ಗಂಟೆಗಳ ವಿಶೇಷ ಪರಿಚಯಾತ್ಮಕ ಮಾಡ್ಯೂಲ್ ರೂಪಿಸಲಾಗಿದೆ.
ಇಂದಿನ ಮಕ್ಕಳು ಮೊಬೈಲ್, ಇಂಟರ್ನೆಟ್ ಮತ್ತು ಡಿಜಿಟಲ್ ಸಾಧನಗಳನ್ನು ಸುಲಭವಾಗಿ ಬಳಸುತ್ತಿದ್ದಾರೆ. ಆದರೆ, ಅವುಗಳ ಮೂಲಕ ಸಿಗುವ ಮಾಹಿತಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಗುರುತಿಸುವುದು ಎಲ್ಲರಿಗೂ ಸುಲಭವಲ್ಲ. ಎಐ ಮೂಲಕ ಸಿದ್ಧಪಡಿಸಿದ ನಕಲಿ ಚಿತ್ರಗಳು, ಡೀಪ್ಫೇಕ್ ವಿಡಿಯೋಗಳು ಮತ್ತು ತಪ್ಪು ಮಾಹಿತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಸರಿಯಾದ ಬಳಕೆಯನ್ನು ಕಲಿಸುವುದು ಅಗತ್ಯವಾಗಿದೆ.
ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT), ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಗಣನಾತ್ಮಕ ಚಿಂತನೆ (Computational Thinking – CT) ವಿಷಯಗಳನ್ನು ಪರಿಚಯಿಸಲು ಮುಂದಾಗಿದೆ.
ಈ ವಿಶೇಷ ಮಾಡ್ಯೂಲ್ನಲ್ಲಿ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಮೂಲಭೂತ ಅಂಶಗಳನ್ನು ಪರಿಚಯಿಸಲಾಗುತ್ತದೆ. ಕೇವಲ ಎಐ ಸಾಧನಗಳನ್ನು ಬಳಸುವುದಷ್ಟೇ ಅಲ್ಲದೆ, ಅವು ನೀಡುವ ಮಾಹಿತಿಯನ್ನು ಹೇಗೆ ಪರಿಶೀಲಿಸಬೇಕು ಮತ್ತು ಅವುಗಳನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸಬೇಕು ಎಂಬುದನ್ನೂ ಕಲಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಈ ಕೆಳಗಿನ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಎಐ ತಂತ್ರಜ್ಞಾನದ ಪರಿಚಯ: ಕೃತಕ ಬುದ್ಧಿಮತ್ತೆ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೂಲಭೂತ ಮಾಹಿತಿ.
ಡೀಪ್ಫೇಕ್ ಗುರುತಿಸುವಿಕೆ: ಎಐ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರಗಳು ಮತ್ತು ವಿಡಿಯೋಗಳ ಬಗ್ಗೆ ಅರಿವು.
ಸುಳ್ಳು ಸುದ್ದಿಗಳ ಪತ್ತೆ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಮಾಹಿತಿಯನ್ನು ಗುರುತಿಸುವ ವಿಧಾನ.
ಚಾಟ್ಬಾಟ್ಗಳ ಉತ್ತರಗಳ ಪರಿಶೀಲನೆ: ಎಐ ನೀಡುವ ಪ್ರತಿಯೊಂದು ಉತ್ತರ ಸರಿಯಾಗಿರುತ್ತದೆ ಎಂದು ನಂಬದೆ, ಅದರ ನಿಖರತೆಯನ್ನು ಪರಿಶೀಲಿಸುವುದು.
ಗಣನಾತ್ಮಕ ಚಿಂತನೆ: ಸಮಸ್ಯೆಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಿ, ಹಂತ ಹಂತವಾಗಿ ಪರಿಹರಿಸುವ ಕೌಶಲ್ಯ ಬೆಳೆಸುವುದು.
2026-27ನೇ ಶೈಕ್ಷಣಿಕ ವರ್ಷದಲ್ಲಿ ಈ ಮಾಡ್ಯೂಲ್ಗಳನ್ನು ಪರಿಚಯಿಸುವ ಕುರಿತು CBSE ಏಪ್ರಿಲ್ 9ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣನಾತ್ಮಕ ಚಿಂತನೆ ಮತ್ತು ಕೃತಕ ಬುದ್ಧಿಮತ್ತೆ ಮಾಡ್ಯೂಲ್ಗಳು ಕಡ್ಡಾಯವಾಗಿರಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ 20 ಗಂಟೆಗಳ ಮಾಡ್ಯೂಲ್ ಅನ್ನು ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನದ ಭಾಗವಾಗಿಯೂ ಬಳಸಲಾಗುತ್ತದೆ.
10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ. 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೂ ಎಐ ವಿಷಯಗಳ ಪರಿಚಯ ನೀಡುವ ಉದ್ದೇಶದಿಂದ ಈ ಮಾಡ್ಯೂಲ್ ರೂಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



