Belagavi NewsBelgaum NewsKannada NewsKarnataka News

ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ: ಇಲ್ಲಿದೆ ಮಾರ್ಗಸೂಚಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಟಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಇದಲ್ಲದೇ ಸಾರ್ವಜನಿಕ ಆರೋಗ್ಯಕ್ಕೂ ದಕ್ಕೆ ಉಂಟಾಗುತ್ತದೆ. ಇದರನ್ವಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ೨೦೧೬ರ ಜುಲೈ ೨೦ ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೇ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರಿಸರ ಸ್ಷೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ ೧೯೭೪ರ ಪ್ರಕಾರ ಕಲಂ ೩೩ (ಎ) ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೋಳ್ಳಲಾಗುವುದು. ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸುಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ತೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ, ಪ್ರತ್ಯೇಕಿಸಿ ನಗರಸಭೆ, ಪುರಸಭೆಯ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೆ ಬಳಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ಇವಗಳನ್ನು ಬಳಸುವಾಗ ಯಾವುದೆ ಪ್ರಾಣಿ ಪಕ್ಷಿಗಳು ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ರಾತ್ರಿ ೮ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ ಉಳಿದ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಎಲ್ಲರು ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button