*ಸರ್ವ ಸಮುದಾಯಗಳ ಸಹಭಾಗಿತ್ವದಿಂದ ಜಯಂತಿಗಳಿಗೆ ಮೆರಗು: ಬುಡಾ ಆದ್ಯಕ್ಷ ಲಕ್ಷಣರಾವ ಚಿಂಗಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳುವಳಿಗೆ ಕನಕದಾಸರು ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿದ್ದಾರೆ. ಕನಕದಾಸರ ವಿಚಾರ ತತ್ವಗಳನ್ನು ಎಲ್ಲರು ಅರಿತುಕೊಂಡು ಸರ್ವ ಸಮುದಾಯಗಳ ಸಹಭಾಗಿತ್ವದಿಂದ ಜಯಂತಿಗಳಿಗೆ ಮೆರಗು ಬರುತ್ತದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ (ನ.08) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಸಮುದಾಯಗಳು ಒಟ್ಟುಗೂಡಿ ಕನಕದಾಸರ ವಿಚಾರಧಾರೆಗಳನ್ನು ಸಾರಲು ಮೆರವಣಿಗೆ, ನಿರೂಪಣೆ, ರೂಪಕಗಳ ಪ್ರದರ್ಶನಗಳ ಮೂಲಕ ಅವರ ಎಲ್ಲರು ಪ್ರಯತ್ನ ಮಾಡುತಿದ್ದೇವೆ. ಭಕ್ತ ಶ್ರೇಷ್ಠ ಕನಕದಾಸರು ಸಮಾಜದ ಸುಧಾರಣೆಗೆ ನಿಂತರಲ್ಲಿ ಪ್ರಮುಖರು ಕೂಡ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರ ವಚನ ಕ್ರಾಂತಿಯ ನಂತರ ಮನುಕುಲದ ಉದ್ಧಾರಕ್ಕಾಗಿ 15ನೇ ಶತಮಾನದಲ್ಲಿ ಕನಕದಾಸರು ಕ್ರಾಂತಿ ಮಾಡಿದರು. ಅಂದಿನ ಕಾಲದಲ್ಲಿ ಪುರಂದರದಾಸರು ಮೇಲ್ವರ್ಗದಲ್ಲಿ ಹುಟ್ಟಿದ ಕಾರಣ ಅವರ ಇತಿಹಾಸ ಬೇಗನೆ ಬೆಳಕಿಗೆ ಬಂತು ಆದರೆ ಕನಕದಾಸರು ಹಿಂದುಳಿದವರಾಗಿದ್ದ ಕಾರಣ ಕನಕದಾಸರ ಇತಿಹಾಸ ತಿಳಿಯಲು ಬಹಳ ವರ್ಷಗಳೆ ಕಳೆಯಬೇಕಾಯಿತು.
ಸಂಸ್ಕೃತಿಕವಾಗಿ, ಪಾರಂಪರಿಕವಾಗಿ ಧಾರ್ಮಿಕವಾಗಿ ನಮ್ಮದೇಯಾದ ರೀತಿಯಲ್ಲಿ ಪಲ್ಲಕ್ಕಿ ಉತ್ಸವ, ಜಾತ್ರೆ, ಬಂಡಾರ ಉತ್ಸವಗಳನ್ನು ಮಾಡುವದರ ಜೊತೆಗೆ ವೈಚಾರಿಕ ಮಂತನ ಆಗಬೇಕು. ಬಾಬಾಸಾಹೇಬ ಅಂಬೇಡ್ಕರರು ಹೇಳಿದಂತೆ ಸಂಘರ್ಷ ಮಾಡಬೇಕು ತನ್ನ ಹೊಟ್ಟೆ ತುಂಬಿಕೊಳ್ಳುವಂತಹ ಶಕ್ತಿ ತಮ್ಮಲ್ಲಿ ಬರಬೇಕು ಇಲ್ಲದಿದ್ದರೆ ಬೇರೆಯವರ ಮುಂದೆ ಗುಲಾಮರಾಗಿ ಬದುಕಬೇಕಾಗುತ್ತದೆ. ಮೊದಲು ತಾನು ಸದೃಢನಾಗಬೇಕು ಎಂದು ಹೇಳಿದರು.
ಕನಕದಾಸರ ನುಡಿಯಂತೆ ಜ್ಞಾನ ವಂತರಾಗಬೇಕು ಜ್ಞಾನವಿಲ್ಲದೆ ಬೆಳವಣಿಗೆ ಸಾದ್ಯವಿಲ್ಲ. ಕನಕದಾಸರ ಸಾಹಿತ್ಯ ಒಂದೆಡೆ ಮುಗಿಯುವ ಸಾಹಿತ್ಯವಲ್ಲಾ ಇಡೀ ಭಾರತದ ದಿಕ್ಕುಗಳಲ್ಲಿ ಪ್ರಯಾಣ ಮಾಡಿ ಶೋಷಿತರು, ತುಳಿತಕ್ಕೊಳಗಾದವರ ಪರವಾಗಿ ಮನುಕುಲದ ಒಳಿತಿಗಾಗಿ ತಮ್ಮ ತತ್ವಗಳ ಮೂಲಕ ಜಾಗೃತಿ ಮೂಡಿಸಿ ಮನುಕುಲದ ಉದ್ಧಾರಕ್ಕಾಗಿ ಹೋರಾಟ ಮಾಡಿದ್ದಾರೆ. ಶ್ರದ್ಧೆ ಇರಬೇಕು ಅಂಧಶ್ರದ್ಧೆ ಇರಬಾರದು. ನೀವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ ನಿಮ್ಮ ಜೊತೆ ಬರುತ್ತದೆ ಎಂದು ಸಂದೇಶ ಸಾರಿದ್ದಾರೆ.
ಹಾಲುಮತ ಸಮುದಾಯದ ಬದುಕು ಒಂದು ಜಾತಿಗೆ ಸೀಮಿತವಲ್ಲ, ನಮ್ಮಲ್ಲಿ ಜಾತಿ ಪರಂಪರೆ ಯಾವುದು ಇಲ್ಲ. ಇತಿಹಾಸ ಪುರುಷರ ಬಗ್ಗೆ ತಿಳುದುಕೊಳ್ಬೇಕು. ನಮ್ಮ ಮಕ್ಕಳಿಗೆ ನಮ್ಮ ಪೂರ್ವಜರ ಹೋರಾಟಗಳ ಬಗ್ಗೆ ತಿಳಿಸಬೇಕು. ಆಧ್ಯಾತ್ಮಿಕ ಸ್ಥಳಗಳಿಗೆ ಹೇಗೆ ಹೋಗುತ್ತೇವೊ ಹಾಗೆ ನಮ್ಮ ಪೂರ್ವಜರ ಇತಿಹಾಸ ಬಿಂಬಿಸುವ ಸ್ಥಳಗಳಿಗೆ ಹೋಗಬೇಕು.
ಮನುಕುಲದ ಉದ್ಧಾರಕ್ಕಾಗಿ ಕೆಲಸ ಮಾಡಿ ಎಂದು ನಮ್ಮ ಎಲ್ಲ ಪೂರ್ವಜರು ಹೇಳಿಕೊಟ್ಟಿದ್ದಾರೆ. ಅವರು ತೋರಿಸಿದ ದಾರಿಯಲ್ಲಿ ನಡೆಯದೆ ಹೋದರೆ ಎಷ್ಟು ಜಯಂತಿ ಮಾಡಿದರು ವ್ಯರ್ಥವಾಗುತ್ತದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಮಾಜ ಸೇವಕರಾದ ಸಿದ್ದಣ್ಣ ತೇಜಿ ಮಾತನಾಡಿ ಎಲ್ಲ ಜಯಂತಿಗಳಲ್ಲಿ ಭಾಗವಹಿಸಬೇಕು. ಇತಿಹಾಸಕಾರರ ಇತಿಹಾಸಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಬಹಳ ಕ್ಲಿಷ್ಟಕರವಾದ ಜಾತಿ ಪದ್ದತಿ ಇದ್ದ ಕಾಲಗಟ್ಟದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿ ವಿದ್ಯೆ ಕಲಿತು, ಕನಕದಾಸರು ಅತ್ಯಂತ ಸುಂದರವಾದ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ ಎಂದು ತಿಳಿಸಿದರು.
ಕನಕದಾಸರೆಂದರೆ ಕೇವಲ ಕುರುಬ ಜಾತಿ ಅಥವಾ ಒಂದು ಧರ್ಮಕ್ಕೆ ಸೀಮಿತವಲ್ಲ. ಇವರು ಅನುಕೂಲದ ಒಳಿತಿಗಾಗಿ ಕಾರ್ಯ ಮಾಡಿದ್ದಾರೆ. ಒಂದು ದಿನ ವ್ಯಾಸರಾಯರ ಜೊತೆ ಉಡುಪಿ ಕೃಷ್ಣ ಮಠಕ್ಕೆ ಹೋದಾಗ ಜಾತಿ ನಿಂದನೆಯಿಂದ ಹೊರಗಡೆ ಉಳಿದು, ನಾಲ್ಕೈದುವಾರ ತಮ್ಮ ಕೀರ್ತನೆಗಳ ಮುಖಾಂತರ ಕೃಷ್ಣನನ್ನು ಒಲಿಸಿಕೊಂಡು ಕನಕನ ಕಿಂಡಿ ಸೃಷ್ಟಿ ಮಾಡಿದರು.
ವಚನ ಕ್ರಾಂತಿ ಮಾಡಿದ ಬಸವಣ್ಣನವರು ಮಾದರಿಯಲ್ಲೇ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕ್ರಾಂತಿ ಮಾಡಿದ್ದಾರೆ ಎಂದು ಸಿದ್ದಣ್ಣ ತೇಜಿ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಉದಯಕುಮಾರ ತಳವಾರ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಯಲ್ಲಪ್ಪ ಕುರುಬರ, ಮಲ್ಲೇಶ ಚೌಗಲೆ ಸೇರಿದಂತೆ ಸಮಾಜದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ
ಕಾರ್ಯಕ್ರಮಕ್ಕೂ ಮುಂಚೆ ಮಹಾನಗರ ಪಾಲಿಕೆ ಮಹಾಪೌರ ಮಂಗೇಶ ಪವಾರ ಅವರು ಭಕ್ತ ಶ್ರೇಷ್ಠ ಕನಕದಾಸರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮಹಾಪೌರರಾದ ವಾಣಿ ವಿಲಾಸ ಜೋಶಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವಿವಿಧ ಜಾನಪದ ಕಲಾ ತಂಡ, ಡೊಳ್ಳು ಕುಣಿತ, ವಾದ್ಯಗಳೊಂದಿಗೆ ಪ್ರಾರಂಭವಾದ ಭವ್ಯ ಮೆರವಣಿಗೆ ನಗರದ ಕನಕದಾಸ ವೃತ್ತದಿಂದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಸಾಗಿತು.



