ಇಂತಹ ಅರಣ್ಯೇತರ ಚಟುವಟಿಕೆಗಳು ಪಶ್ಚಿಮ ಘಟ್ಟಗಳ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಕೊಡಚಾದ್ರಿಯಂತಹ ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಹಾಗೂ ಅಳಿವಿನಂಚಿನಲ್ಲಿರುವ ಹಾಗೂ ಬೆರಣಿಕೆಯಷ್ಟಿರುವ ಸಿಂಗಳೀಕದಂತಹ ವನ್ಯಜೀವಿಗಳ ಪಾಲಿಗೆ ಮಾರಕವಾಗಲಿವೆ ಎಂದು ತಿಳಿಸಿದ್ದಾರೆ. ರಾಷ್ಟೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿ ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸಬಾರದೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪ್ರವಾಸಿಗರು ಹಾಗೂ ಚಾರಣಿಗರ ಅನುಕೂಲಕ್ಕಾಗಿ ಕೊಡಚಾದ್ರಿ ಬೆಟ್ಟದ ಮೇಲಿನ ವೀಕ್ಷಣಾ ಸ್ಥಳಕ್ಕೆ ತಲುಪಲು ಕಟ್ಟಿನಹೊಳೆಯಿಂದ ಕೊಡಚಾದ್ರಿ ಬೆಟ್ಟಕ್ಕೆ ಹೋಗಲು ಈಗಿರುವ ಮಣ್ಣಿನ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಉನ್ನತೀಕರಿಸಲು ರಾಜ್ಯ ವನ್ಯಜೀವಿ ಮಂಡಳಿಯು ಶಿಫಾರಸ್ಸು ಮಾಡಿ ಕೇಂದ್ರ ಸರಕಾರದ ಒಪ್ಪಿಗೆಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಗೆ ಪ್ರಸ್ತಾವನೆಯನ್ನು ಕಳುಹಿಸಿ ಕೊಟ್ಟಿರುವುದು ವನ್ಯಜೀವಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೊಳಪಡುವ ಮೂಕಾಂಬಿಕಾ ಅಭಯಾರಣ್ಯದಲ್ಲಿ ಅಂದಾಜು 4.5 ಹೆಕ್ಟೇರ್ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾಗರ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಗೊಳಪಡುವ ಮೂಕಾಂಬಿಕಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ಅಂದಾಜು 0.99 ಹೆಕ್ಟೇರ್ ಸೇರಿದಂತೆ ಒಟ್ಟು ಅಂದಾಜು 5.5 ಹೆಕ್ಟೇರ್ ಅರಣ್ಯ ಪ್ರದೇಶದ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು.
ಈ ರಸ್ತೆಯ ಮೂಲಕ ಕೊಡಚಾದ್ರಿಯಲ್ಲಿ ಈಗಾಗಲೇ ಇರುವ ರಾಜ್ಯ ಹೆದ್ದಾರಿ, ರೆಸ್ಟೋರೆಂಟ್ಗಳು, ವಸತಿಗೃಹಗಳಿಗೆ ಸಂಪರ್ಕ ಒದಗಿಸಿದ್ದೇ ಆದಲ್ಲಿ ಪ್ರವಾಸಿಗರು, ಚಾರಣಿಗರು ಹಾಗೂ ಭಕ್ತಾದಿಗಳಿಗೆ ಕೊಡಚಾದ್ರಿಯು ಒಂದು ಉತ್ತಮ ಪ್ರವಾಸೋದ್ಯಮ ಸ್ಥಳವಾಗಿ ರೂಪುಗೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. ಅಲ್ಲದೆ ನಗರವಾಸಿಗಳಿಗೆ ಒಂದು ಪ್ರಶಾಂತ ಸ್ಥಳವಾಗಿ ಕೊಡಚಾದ್ರಿಯು ರೂಪುಗೊಳ್ಳಲಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಯೋಜನೆಯನ್ನು ಅರಣ್ಯ ಪ್ರದೇಶದಲ್ಲಿ ಉದ್ದೇಶಿಸಿರುವುದನ್ನು ಸಮರ್ಥಿಸಿಕೊಂಡಿದೆ.
ಯೋಜನಾ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಹಾಗೂ ಪಶ್ಚಿಮ ಘಟ್ಟಕ್ಕೆ ಸೀಮಿತವಾಗಿರುವ ಸಿಂಹ ಬಾಲದ ಕೋತಿ (ಸಿಂಗಳೀಕ) ಸೇರಿದಂತೆ ಕಾಟಿ, ಕಾಡುಕುರಿ, ಕೆಂದಳಿಲು ಸೇರಿದಂತೆ ಹಲವಾರು ಪ್ರಾಣಿ ಹಾಗೂ ಸಸ್ಯ ಪ್ರಭೇದಗಳಿವೆ. ಆದರೆ ಈಗಿರುವ ರಸ್ತೆಯನ್ನು ಉನ್ನತೀಕರಿಸುವುದರಿಂದ ಸುತ್ತಲಿನ ಪರಿಸರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲಬೆಂಬ ಆಘಾತಕಾರಿ ಶಿಫಾರಸ್ಸು ಮಾಡಿ ಸಾಗರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯೋಜನೆಯನ್ನು ಅನುಮೋದಿಸಿದ್ದಾರೆ.
ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಜನಾ ಪ್ರದೇಶದಲ್ಲಿ ಯಾವುದೇ ಅಳಿವಿನಂಚಿನಲ್ಲಿರುವ ಹಾಗೂ ವಿಶಿಷ್ಟ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳಿಲ್ಲವೆಂದು ತಮ್ಮ ಸ್ಥಳ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿ ಯೋಜನೆಗೆ ಶಿಫಾರಸ್ಸು ಮಾಡಿದ್ದಾರೆ.
ಇನ್ನು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿಗಳು ಹಾಗೂ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕೆಲವೊಂದು ಷರತ್ತಿಗೊಳಪಟ್ಟು ಯೋಜನೆಗೆ ಅನುಮತಿ ನೀಡಬಹುದೆಂದು ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದಾರೆ.
ಅಲ್ಲದೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಸಂರಕ್ಷಣೆ), ಮುಖ್ಯ ವನ್ಯಜೀವಿ ಪರಿಪಾಲಕರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಮುಖ್ಯಸ್ಥರು, ಅರಣ್ಯ ಪಡೆ) ಸಹ ಯೋಜನೆಗೆ ಶಿಫಾರಸ್ಸು ಮಾಡಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜನೆವರಿ 19 ರಂದು ಜರುಗಿದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲೂ ಸಹ ಯೋಜನೆಗೆ ಮಂಡಳಿಯು ಒಪ್ಪಿಗೆ ಸೂಚಿಸಿ ಕೇಂದ್ರ ಸರಕಾರದ ಒಪ್ಪಿಗೆಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಗೆ ಪ್ರಸ್ತಾವನೆಯನ್ನು ಕಳುಹಿಸಿ ಕೊಟ್ಟಿದ್ದು ವನ್ಯಜೀವಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಶಿಫಾರಸ್ಸುಗಳು ಕೇಂದ್ರ ಸರಕಾರವು ಸಂರಕ್ಷಿತ ಪ್ರದೇಶಗಳಲ್ಲಿ ರಸ್ತೆಗಳ ಕುರಿತಂತೆ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳ ಸ್ಪಷ್ಟ ಉಲ್ಲಂಘನೆಯೆಂದು ಹೆಸರು ಹೇಳಲಿಚ್ಛಿಸದ ವನ್ಯಜೀವಿ ಕಾರ್ಯಕರ್ತರೊಬ್ಬರು ತಿಳಿಸಿದರು.
ದೇಶದೆಲ್ಲೆಡೆ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಶಿಫಾರಸ್ಸು ಮಾಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಯು 2013 ರಲ್ಲಿ ತಜ್ಞರ ಉಪ ಸಮಿತಿಯೊಂದನ್ನು ರಚಿಸಿತ್ತು. ವರದಿ ನೀಡಿದ್ದ ಉಪ ಸಮಿತಿಯು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈಗಿರುವ ರಸ್ತೆಗಳನ್ನು ಉನ್ನತೀಕರಿಸಬಾರದೆಂದು ಶಿಫಾರಸ್ಸು ಮಾಡಿತ್ತು. ಹಾಗೂ ಈ ಶಿಫಾರಸ್ಸುಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಯು 2014 ರಲ್ಲಿ ಒಪ್ಪಿಕೊಂಡಿತ್ತು.
ಹೀಗಿರುವಾಗ ಕೊಡಚಾದ್ರಿಯ ಮಣ್ಣಿನ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಶಿಫಾರಸ್ಸು ಮಾಡಲು ಹೇಗೆ ಸಾಧ್ಯ? ದೇಶದ ಎಷ್ಟೋ ಕಡೆ ಅಷ್ಟೇ ಏಕೆ ರಾಜ್ಯದ ಹಲವಾರು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗ್ರಾಮಸ್ಥರಿಗೆ ರಸ್ತೆಗಳ ಅತ್ಯಾವಶ್ಯಕತೆಯಿದ್ದರೂ ವನ್ಯಜೀವಿ ಸಂರಕ್ಷಣೆ ಕಾರಣ ಕೊಟ್ಟು ರಸ್ತೆ ಉನ್ನತೀಕರಣಕ್ಕೆ ಅವಕಾಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುವುದು ಎಷ್ಟರ ಮಟ್ಟಿಗೆ ಸಮಂಜಸವೆಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಈಗಾಗಲೇ ಹಲವಾರು ಅರಣ್ಯ ಪ್ರದೇಶಗಳಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ವರ್ತನೆ, ಪ್ಲಾಸ್ಟಿಕ್ ಅವಾಂತರ ಮುಂತಾದ ಘಟನೆಗಳನ್ನು ನಾವು ನಿಯಮಿತವಾಗಿ ಕೇಳುತ್ತಲೇ ಇರುತ್ತೇವೆ. ಅಲ್ಲದೇ ಕೊಡಚಾದ್ರಿಯಂತಹ ಪ್ರದೇಶಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲೇ ವೀಕ್ಷಿಸಬೇಕೇ ವಿನಃ ಕಾಂಕ್ರೀಟಿಕರಣ ಮಾಡುವುದಲ್ಲ. ಇದೇ ತರಹ ಮಾಡುತ್ತ ಹೋದರೆ ದೇಶದ ಇತರೆ ಸಂರಕ್ಷಿತ ಪ್ರದೇಶಗಳಲ್ಲೂ ಸಹ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಬೇಕಾಗುತ್ತದೆ.
ತನ್ಮೂಲಕ ನೈಸರ್ಗಿಕ ಆವಾಸಸ್ಥಾನಗಳನ್ನು ನಾವಾಗಿಯೇ ಹಾಳು ಮಾಡಿದಂತಾಗುತ್ತದೆಯೆಂದು ವನ್ಯಜೀವಿ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೇ ಇಂತಹ ಅರಣ್ಯೇತರ ಚಟುವಟಿಕೆಗಳು ಪಶ್ಚಿಮ ಘಟ್ಟಗಳ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಕೊಡಚಾದ್ರಿಯಂತಹ ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಹಾಗೂ ಅಳಿವಿನಂಚಿನಲ್ಲಿರುವ
ಹಾಗೂ ಬೆರಣಿಕೆಯಷ್ಟಿರುವ ಸಿಂಗಳೀಕದಂತಹ ವನ್ಯಜೀವಿಗಳ ಪಾಲಿಗೆ ಮಾರಕವಾಗಲಿವೆ ಎಂದು ತಿಳಿಸಿದ್ದಾರೆ. ರಾಷ್ಟೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿ ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸಬಾರದೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ; ಸ್ವಾಮೀಜಿ ಒತ್ತಡ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ