Kannada NewsKarnataka NewsNationalPolitics

*ಲಾಜಿಸ್ಟಿಕ್ಸ್ ವೆಚ್ಚ ಶೇ.8ಕ್ಕೆ ಇಳಿಸಲು ಕೇಂದ್ರ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ಆಹಾರ ಪೂರೈಕೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.8ಕ್ಕೆ ಇಳಿಸುವ ಗುರಿ ಹೊಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು. 

ನವದೆಹಲಿಯಲ್ಲಿ ಕೇಂದ್ರ ಗೋದಾಮು ನಿಗಮದ (ಸಿಡಬ್ಲ್ಯೂಸಿ) 69ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, . ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ(NLP) ಮತ್ತು PM ಗತಿ ಶಕ್ತಿ ಕಾರ್ಯಕ್ರಮ ಆರಂಭಿಸುವ ಮೂಲಕ ಸರ್ಕಾರ, ಲಾಜಿಸ್ಟಿಕ್ ವೆಚ್ಚವನ್ನು ಶೇ.13 – 14 ರಿಂದ ಶೇ.8ಕ್ಕೆ ಇಳಿಸಲಿದೆ ಎಂದು ಹೇಳಿದರು.

ಕೇಂದ್ರ ಗೋದಾಮು ನಿಗಮ (CWC) ಆಧುನಿಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ದಕ್ಷತೆ ಹೆಚ್ಚಿಸುವಂತಹ ಉದ್ದೇಶಗಳನ್ನು ಬೆಂಬಲಿಸಲು ಬದ್ಧವಾಗಿದೆ. ಹೀಗಾಗಿ ಗೋದಾಮು ಮತ್ತು ಲಾಜಿಸ್ಟಿಕ್ಸ್ ವಲಯವನ್ನು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಎಂದೇ ಪರಿಗಣಿಸಲಾಗಿದೆ ಎಂದು ಹೇಳಿದರು.

ಇ-ಕಾಮರ್ಸ್‌ನ ತ್ವರಿತ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯತ್ತ ಸರ್ಕಾರ ಗಮನಹರಿಸಿದೆ. CWC 1957ರಲ್ಲಿ ಪ್ರಾರಂಭ ಆದಾಗಿನಿಂದ ಭಾರತದ ಲಾಜಿಸ್ಟಿಕ್ಸ್ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪ್ರಮುಖವಾಗಿದೆ ಎಂದರು.

Home add -Advt

ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಹತ್ತಿ ಮತ್ತು ನೆಲಗಡಲೆ ಸೇರಿದಂತೆ ಅಗತ್ಯ ವಸ್ತುಗಳ ದಕ್ಷ ಗೋದಾಮು, ನಿರ್ವಹಣೆ ಮತ್ತು ಸಾಗಣೆಗೆ ನೇರವಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ (PM-AASHA) ದಲ್ಲಿ CWC ನಿರ್ಣಾಯಕ ಪಾತ್ರ ಪ್ರದರ್ಶಿಸಿದೆ ಎಂದರು.

ಕೇಂದ್ರ ಗೋದಾಮು ನಿಗಮ 700ಕ್ಕೂ ಹೆಚ್ಚು ಗೋದಾಮುಗಳ ವ್ಯಾಪಕ ಜಾಲ ಹೊಂದಿದೆ ಮತ್ತು 148.29 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದೊಂದಿಗೆ ದಕ್ಷತೆ, ನಾವೀನ್ಯತೆ ಮತ್ತು ವಿಶ್ವಾಸಾರ್ಹತೆಯ ಸಂಕೇತವಾಗಿ ವಿಕಸನಗೊಂಡಿದೆ ಎಂದರು.

ಆಧುನಿಕ ತಂತ್ರಜ್ಞಾನದಲ್ಲಿ ಕ್ರಾಂತಿ

ಇಂದು ಆಧುನಿಕ ತಂತ್ರಜ್ಞಾನ ಆಧಾರಿತ ಗೋದಾಮು ನಿರ್ಮಾಣವು ಈ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡಿದೆ, ಭಾರತದ ಗೋದಾಮು ಮಾರುಕಟ್ಟೆ 2027ರ ವೇಳೆಗೆ ಗಮನಾರ್ಹವಾಗಿ 15% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು $35 ಶತಕೋಟಿ ತಲುಪುತ್ತದೆ ಎಂದು ಹೇಳಿದರು.

2023-24ರ ಹಣಕಾಸು ವರ್ಷದಲ್ಲಿ CWC ತನ್ನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 21.65 ಲಕ್ಷ ಚದರ ಅಡಿಗಳಷ್ಟು ವಿಸ್ತರಿಸಿದೆ ಮತ್ತು ₹613 ಕೋಟಿ ದಾಖಲೆಯ ಬಂಡವಾಳ ವೆಚ್ಚವನ್ನು ಹೊಂದಿದೆ. 2021ರಿಂದ ಅದರ ಇ-ಕಾಮರ್ಸ್ ಸಾಮರ್ಥ್ಯವು ಹನ್ನೆರಡು ಪಟ್ಟು ಬೆಳೆದು 2025ರಲ್ಲಿ ಸುಮಾರು 80 ಲಕ್ಷ ಚದರ ಅಡಿಗಳಿಗೆ ತಲುಪಿದೆ ಎಂದು ಹೇಳಿದರು.

ಆಸ್ತಿ ಹಣಗಳಿಕೆ ಯೋಜನೆಯಡಿಯಲ್ಲಿ ₹ 820 ಕೋಟಿ ಹೂಡಿಕೆಯನ್ನು ಕ್ರೋಢೀಕರಿಸುವ ಮೂಲಕ 18 ಸ್ಥಳಗಳಲ್ಲಿ ಸಿಡಬ್ಲ್ಯೂಸಿಯ ಆಸ್ತಿಗಳ ಆಸ್ತಿ ಹಣಗಳಿಕೆಯನ್ನು ಸಚಿವರು ಶ್ಲಾಘಿಸಿದರು.

ಬೆಂಬಲ ಬೆಲೆ ಹೆಚ್ಚಿಸಿದ ಪ್ರಧಾನಿ ಮೋದಿ

2025-26ರ ಮಾರುಕಟ್ಟೆ ಋತುವಿನಲ್ಲಿ ಕಡ್ಡಾಯವಾಗಿ ಎಲ್ಲಾ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರ ಶ್ಲಾಘನೀಯ. ರೈತರ ಕಲ್ಯಾಣಕ್ಕಾಗಿ ಅವರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

CWC ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿನ್ಹಾ ಪ್ರಾಸ್ತಾವಿಕ ಮಾತನಾಡಿ, 2024-25ರಲ್ಲಿ 120 ಲಕ್ಷ ಚದರ ಅಡಿಗಿಂತ ಹೆಚ್ಚು ಸಾಮರ್ಥ್ಯವ್ಯನ್ನು CWC ಹೊಂದಿದೆ. ಪ್ರಸ್ತುತ ಋತುವಿನಲ್ಲಿ 70 ಲಕ್ಷ ಹತ್ತಿ ಬೇಲ್‌ಗಳು ಮತ್ತು 1.90 ಕೋಟಿ ಚೀಲಗಳ ನೆಲಗಡಲೆ ಸಂಗ್ರಹಣೆ ಹೊಂದಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸ್ಥಿರವಾದ ತಂಡದ ಪ್ರಯತ್ನಗಳಿಂದಾಗಿ ನಿಗಮಕ್ಕೆ ‘ನವರತ್ನ ಸ್ಥಾನಮಾನ’ ಲಭ್ಯವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ ಮತ್ತು ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button