Belagavi NewsBelgaum NewsKannada NewsLatest

*ವಿವಿಧ ಗ್ರಾಮ ಪಂಚಾಯತಿಗಳ ಕಾಮಗಾರಿ ಪರಿಶೀಲನೆ ನಡೆಸಿದ ಜಿ.ಪಂ. ಸಿ.ಇ.ಒ*

ಚನ್ನಮ್ಮ ಕಿತ್ತೂರು :  ಕಿತ್ತೂರು ತಾಲೂಕಿನ ಬೈಲೂರ ಹಾಗೂ ದೇವರಶೀಗಿಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರು ಮಂಗಳವಾರ  ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

24*7 ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜಿಲ್ಲೆಯ ಮೊದಲ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿರುವ ದೇವರಶೀಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾರಕೊಪ್ಪ ಗ್ರಾಮದಲ್ಲಿನ ಜಲಜೀವನ ಮಿಷನ್ ಕಾಮಗಾರಿ ಪರಿಶೀಲಿಸಿದ  ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಚತಃ ಸ್ಥಳೀಯ ನಿವಾಸಿಗಳಿಂದ ನೀರು ಬೇಡಿಕೆ, ಸಂಗ್ರಹ, ಪೂರೈಕೆ ಪ್ರಮಾಣ ಹಾಗೂ ನೀರಿನ ಬಿಲ್ ಬಗ್ಗೆಯೂ ಮಾಹಿತಿ ಪಡೆದರಲ್ಲದೇ, ಸಕಲ ಜೀವ ಸಂಕುಲಕ್ಕೂ ಜೀವ ಜಲ ಅಗತ್ಯವಾಗಿದ್ದು, ಹಿತಮಿತವಾಗಿ ಬಳಸಬೇಕು. ಅನಗತ್ಯವಾಗಿ  ನೀರನ್ನು ವ್ಯರ್ಥಮಾಡಬಾರದು ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.

ಬಳಿಕ ಬೈಲೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕರ ವಸೂಲಾತಿ ಪ್ರಗತಿ,  ಇ-ಸ್ವತ್ತುಗಳ ಬೇಡಿಕೆ ಹಾಗೂ ವಿತರಣೆಯ  ಬಗ್ಗೆ ಸಂಬಂಧಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ  ಸಕಾಲಕ್ಕೆ ವಿತರಣೆ ಮಾಡಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಜನರ ಕುಂದುಕೊರತೆಗಳ ನಿವಾರಣೆಗೆ ಒತ್ತು ನೀಡುವುದರ ಜೊತೆಗೆ ಸರಕಾರದ  ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಬೇಕು ಹಾಗೂ ಮುತು ವರ್ಜಿ ವಹಿಸಬೇಕು ಎಂದು ಸೂಚಿಸಿದರು.

ಗ್ರಾಮದಲ್ಲಿನ ಕೂಸಿನ ಮನೆಗೆ ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು,  ವಿದ್ಯಾರ್ಥಿಗಳ ಓದಿಗೆ ಅಗತ್ಯವಿರುವ  ಪುಸ್ತಕ ಹಾಗೂ ಪಿಠೋಪಕರಣಗಳು ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರಲ್ಲದೇ, ಕೂಸಿನ ಮನೆಯು ಪ್ರತಿದಿನವೂ ತೆರೆದಿರಬೇಕು. ಮನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಜಿಲ್ಲೆಯಿಂದ ನಿಗಧಿಪಡಿಸಲಾದ ಪೌಷ್ಟಿಕ ಆಹಾರವನ್ನು ಮೆನ್ಯು ಪ್ರಕಾರ ನೀಡಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಬೇಕೆಂದು ಸಂಬಂಧಿತರಿಗೆ ನಿರ್ದೇಶನ ನೀಡಿದರು.

ಅಲ್ಲದೇ, ಮನರೇಗಾ ಯೋಜನೆಯಡಿ ಹೆಚ್ಚಿನ ಮಾನವ ದಿನಗಳ ಸೃಜಿಸುವ ಮೂಲಕ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಬೇಕು. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕು ಹಾಗೂ ಜನರ ಬೇಡಿಕೆಗೆ ತಕ್ಕಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಆರಂಭಿಸಬೇಕು ಮತ್ತು  ಕೂಲಿಕಾರರಿಗೆ ಕೆಲಸ ಕೊಡಲು ವಿಳಂಬ ಸಲ್ಲದು ಎಂದು ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಘೋರ್ಪಡೆ,  ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ ಹೂಲಿ,  ಸಹಾಯಕ ನಿರ್ದೇಶಕ ಮಹಮ್ಮದಗೌಸ್ ರಿಸಾಲ್ದಾರ್, ಸುರೇಶ ನಾಗೋಜಿ, ತಾಂತ್ರಿಕ ಸಂಯೋಜಕ ವಿನಯಕುಮಾರ ಪಾಟೀಲ್, ಐಇಸಿ ಸಂಯೋಜಕಿ ಎಸ್.ಬಿ.ಜವಳಿ ಪಿಡಿಓ ಈಶ್ವರ ಹಡಪದ, ವಿನಯಕುಮಾರ ಕೊರವಿ  ಸೇರಿದಂತೆ  ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button