*ವಿವಿಧ ತಾಲೂಕಿಗೆ ಭೇಟಿ ನೀಡಿದ ಸಿಇಓ ರಾಹುಲ್ ಶಿಂಧೆ: ಜೆಜೆಎಂ ಕಾಮಗಾರಿ ವೀಕ್ಷಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಮೂಡಲಗಿ, ಗೋಕಾಕ, ರಾಯಬಾಗ ತಾಲೂಕುಗಳ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿನ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳನ್ನು ಬುಧವಾರ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ತಡಸಲೂರ ಹಾಗೂ ಸೊಪ್ಪಡ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿನ ಜಲಜೀವನ ಮಿಷನ್ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಡಸಲೂರ ಗ್ರಾಪಂ ವ್ಯಾಪ್ತಿಯಲ್ಲಿನ ಹಲಕಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ವಿವರವಾದ ಯೋಜನಾ ವರದಿಯಂತೆ ಕಾಮಗಾರಿ ಆಗಿರುವ ಕುರಿತು ಗ್ರಾಪಂ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.
ರಾಮದುರ್ಗ ತಾಲೂಕಿನ ಕೆ ಚಂದರಗಿ, ಗುದುಗೊಪ್ಪ, ಹಾಗೂ ಹಿರೇಕೊಪ್ಪ ಕೆ.ಎಸ್., ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕೊಪ್ಪ ಕೆ ಎಸ್, ಬಾಗೋಜಿಕೊಪ್ಪ ಹಾಗೂ ಹುಲಕುಂದ ಗ್ರಾಪಂಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ನೀಡಿ, ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ನೀರಿನ ಟ್ಯಾಂಕಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ವಹಿಸಿ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ನಳ ಸಂಪರ್ಕ ಒದಗಿಸಿ ನೀರು ಕೊಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.
ಬಳಿಕ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಗೋಕಾಕ ತಾಲೂಕಿನ ಕಳ್ಳಿಗುದ್ದಿ, ಕೌಜಲಗಿ, ಗೋಸಬಾಳ, ಬಿಲಕುಂದಿ ಹಾಗೂ ತಳಕಟನಾಳ ಗ್ರಾಪಂಗಳ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯಡಿ ಮನೆಗೆ ಅಳವಡಿಸಲಾಗಿರುವ ನಳ ಸಂಪರ್ಕದ ಬಗ್ಗೆ ಸ್ಥಳೀಯ ಫಲಾನುಭವಿಗಳೊಂದಿ ಚರ್ಚೆ ಮಾಡಿ. ನಳಗಳಿಗೆ ನೀರು ಬರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೂಡಲಗಿ ತಾಲೂಕಿನ ಮಸಗುಪ್ಪಿ, ಧರ್ಮಟ್ಟಿ ಗ್ರಾಪಂಗಳು ಹಾಗೂ ರಾಯಬಾಗ ತಾಲೂಕಿನ ನಿಪನಾಳ ಮತ್ತು ಬೆಂಡವಾಡ ಗ್ರಾಪಂ ವ್ಯಾಪ್ತಿಯ ಜೋಡಟ್ಟಿ ಗ್ರಾಪಂಗಳ ವ್ಯಾಪ್ತಿಯಲ್ಲಿನ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ ಇಇ ಕಿರಣ ಗೋರ್ಪಡೆ, ತಾಪಂ ಇಒಗಳಾದ ಆನಂದ ಬಡಕುಂದ್ರಿ, ಬಸವರಾಜ ಐನಾಪುರ, ಎಫ್.ಜಿ.ಚಿನ್ನನವರ, ಸುರೇಶ ಕದ್ದು, ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇಗಳು ತಾಪಂ. ಪಂ.ರಾಜ್ & ಗ್ರಾ.ಉ ಸಹಾಯಕ ನಿರ್ದೇಶಕರುಗಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.