*ಚೈತ್ರಾ ಕುಂದಾಪುರ ವಂಚನೆ ಕೇಸ್; ಆರೋಪಿ ಹಾಲಶ್ರೀ ಸ್ವಾಮೀಜಿ ಜೊತೆ ಚಕ್ರವರ್ತಿ ಸೂಲಿಬೆಲೆ… ಫೋಟೋ ವೈರಲ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೈಂದೂರಿನ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದಲ್ಲಿ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಹಾಲಮಠದ ಅಭಿನವ ಹಾಲಶ್ರೀ ಸ್ವಾಮಿಜಿಯ ಹೆಸರು ಕೇಳಿಬಂದಿದ್ದು, ಅವರು ಎ3 ಆರೋಪಿಯಾಗಿದ್ದಾರೆ.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬಂಧನವಾಗುತ್ತಿದ್ದಂತೆ ಹಾಲಶ್ರೀ ಸ್ವಾಮಿಜಿ ತಲೆಮರೆಸಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಚೈತ್ರಾ ಕುಂದಾಪುರ, ‘ಸ್ವಾಮಿಜಿಯನ್ನು ಬಂಧಿಸಲಿ. ಆಗ ಎಲ್ಲಾ ಸತ್ಯಗಳು ಹೊರಬರುತ್ತದೆ’ ಎಂದು ಹೇಳಿಕೆ ನೀಡಿದ್ದು, ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಯೂ ಭಾಗಿಯಾಗಿದ್ದಾರೆಯೇ ಎಂಬುದಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ.
ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಆರೋಪಿ ಹಾಲಶ್ರೀ ಸ್ವಾಮೀಜಿ ಜೊತೆ ಇದೀಗ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಇರುವ ಫೋಟೋಗಳು ಭಾರಿ ವೈರಲ್ ಆಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಹಾಲಶ್ರೀ ಸ್ವಾಮೀಜಿ ಹಾಗೂ ಚಕ್ರವರ್ತಿ ಸೂಲಿಬೆಲೆ ರೈಲಿನಲ್ಲಿ ಪ್ರಯಾಣಿಸುವ ಹಾಗೂ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಹರಿದಾದುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
 
					 
				 
					 
					 
					 
					
 
					 
					 
					


