*ಬೆಳಗಾವಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ ಅತ್ಯಾಚಾರ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿಯಲ್ಲಿ ಘೋರ ಘಟನೆ ಬೆಳಕಿಗೆ ಬಂದಿದೆ. 5 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿಯೇ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಜಿಲ್ಲೆಯ ಯರಗಟ್ಟಿ ಮಸೀದಿಯಲ್ಲಿ ಕಾಮುಕನೊಬ್ಬ ಹೇಯ ಕೃತ್ಯವೆಸಗಿದ್ದಾನೆ. ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತುಫೇಲ್ ಅಹ್ಮದ್ (22) ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಆದರೆ ಬಾಲಕಿ ಪೋಷಕರಿಗೆ ಮಸೀದಿಯವರು ದೂರು ನೀಡದಂತೆ ಬೆದರಿಕೆಯೊಡ್ಡಿದ್ದ ಕಾರಣಕ್ಕೆ ಹೆದರಿ ಸುಮ್ಮನಾಗಿದ್ದರು.
ಪುನೀತ್ ಕೆರೆಹಳ್ಳಿ ಎಂಬುವವರ ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿರುವ ಕಾರಣಕ್ಕೆ ಪೋಷಕರು ದೂರು ನೀಡಲಾಗದ ಸ್ಥಿತಿಯಲ್ಲಿದ್ದಾರೆ. ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಕಾನೂನು ಕ್ರಮ ಕೈಗೊಂಡು ನ್ಯಾಯಕೊಡಿಸುವಂತೆ ಒತ್ತಾಯಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮುರಗೋಡ ಠಾಣೆ ಪೊಲೀಸರು ಬಾಲಕಿ ಪೋಷಕರನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹಿಂಡಲಾಗಾ ಜೈಲಿಗಟ್ಟಿದ್ದಾರೆ.