ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರವಾಗಿ ಸಿಐಡಿ ಅಧಿಕಾರಿಗಳು ಪತ್ರದ ಮೂಲ ಪತ್ತೆ ಮಾಡಿದ್ದಾರೆ.
ಸಚಿವ ಚಲುವರಾಯಸ್ವಾಮಿ ಲಂಚ ಪಡೆದಿದ್ದಾರೆ ಎಂದು ಆರೋಪಿ 8 ಜನ ಕೃಷಿ ಸಹಾಯಕ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು, ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.
ಪತ್ರದ ಮೂಲ ಹುಡುಕಿ ಹೊರಟ ಅಧಿಕಾರಿಗಳು ಮಂಡ್ಯ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಾಜ್ಯಪಾಲರಿಗೆ ಪತ್ರ ಪೋಸ್ಟ್ ಆಗಿರುವುದು ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಯಿಂದ ಎಂದು ತಿಳಿದುಬಂದಿದೆ.
ಮೈಸೂರಿನ ಅಂಚೆ ಕಚೇರಿಗೆ ತೆರಳಿ ಪರಿಶೀಲನೆನಡೆಸಿರುವ ಅಧಿಕಾರಿಗಳು ಕೆಲ ದಾಖಲೆ ಕಲೆಹಾಕಿದ್ದಾರೆ. ಜುಲೈ 14ರಂದು ಸರಸ್ವತಿಪುರಂ ಅಂಚೆ ಕಚೇರಿಯಿಂದ ಪತ್ರ ಪೋಸ್ಟ್ ಆಗಿರುವುದು ಗೊತ್ತಾಗಿದೆ. ಅಲ್ಲದೇ ಇನ್ನಷ್ಟು ದಾಖಲೆಗಳನ್ನು ನೀಡುವಂತೆ ಅಂಚೆ ಸಿಬ್ಬಂದಿಗಳಿಗೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ