*ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ ವತಿಯಿಂದ ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಗೌರವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ (ಬಿಸಿಸಿಐ) ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನ 2025ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೆಳಗಾವಿಯ ಐದು ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಗೌರವ ಸಮರ್ಪಿಸಲಾಯಿತು.
ಸೆಂಟ್ರಾ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ನೀತಾ ದೇಶಪಾಂಡೆ, ಅನ್ನಪೂರ್ಣ ಫುಡ್ ಪ್ರಾಡಕ್ಟ್ಸ್ ನ ಮುಖ್ಯಸ್ಥೆ ಸುನೀತಾ ಸುಧಾಕರ್ ಪಾಟಣ್ಕರ್, ಫ್ಲೋಮೆಕ್ ಪ್ರಿಸಿಷನ್ಸ್ ಮುಖ್ಯಸ್ಥೆ ಮಂಜುಳಾ ರಾಜಶೇಖರ್ ಕಲ್ಯಾಣಶೆಟ್ಟಿ, ಅದಿತಿ ಇನ್ಫಿನಿಟಿ ಸ್ಟುಡಿಯೋನ ಪಾಲುದಾರಿಕೆ ಹೊಂದಿರುವ ಸರಿಕಾ ನಾಗರಾಜ ರೈಬಾಗಿ ಹಾಗೂ ಪ್ರೀತಿ ಪೇಪರ್ಸ್ ಮುಖ್ಯಸ್ಥೆ ಪ್ರತಿಭಾ ಸುರೇಶ್ ಹೊಸೂರ್ ಅವರು ಗೌರವ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಸಿಐ ಅಧ್ಯಕ್ಷರಾದ ಪ್ರಭಾಕರ ನಾಗರಮುನೋಳಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತ ನಿರ್ದೇಶಕರಾದ ಸತ್ಯನಾರಾಯಣ ಭಟ್, ಮಹಿಳಾ ಉದ್ಯಮಿಗಳ ಕೊಡುಗೆಯನ್ನು ಪ್ರಶಂಸಿಸಿ ಆರ್ಥಿಕ ಅಭಿವೃದ್ಧಿಯಲ್ಲಿ ಅವರ ಮಹತ್ವದ ಪಾತ್ರವನ್ನು ವಿವರಿಸಿದರು.
ಜ್ಯೋತ್ಸ್ನಾ ಪೈ ಅವರು ಪುರಸ್ಕೃತರನ್ನು ಪರಿಚಯಿಸಿದರು. ಅನಿತಾ ಕಣಬರ್ಗಿ ಅವರು ಆಯ್ಕೆ ಮಾನದಂಡಗಳನ್ನು ವಿವರಿಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಮೋನಿಕಾ ಬಾಗೇವಾಡಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಪುರಸ್ಕೃತರ ಕುಟುಂಬ ಸದಸ್ಯರು, ಮಹಿಳಾ ಉದ್ಯಮಿಗಳು, ಬೆಳಗಾವಿಯ ವ್ಯಾಪಾರ ಹಾಗೂ ಕೈಗಾರಿಕಾ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಬಿಸಿಸಿಐ ಪದಾಧಿಕಾರಿಗಳಾದ ಸತೀಶ ಕುಲಕರ್ಣಿ, ಸ್ವಪ್ನಿಲ್ ಶಾ, ಉದಯ ಜೋಶಿ, ಆನಂದ ದೇಸಾಯಿ, ಮನೋಜ್ ಮತ್ತಿಕೋಪ ಹಾಗೂ ವೈಭವ್ ವರ್ಣೇಕರ್ ಉಪಸ್ಥಿತರಿದ್ದರು.


