*ಚಂದ್ರನಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳ ‘ಶಿವಶಕ್ತಿ’ ಎಂದು ಚಂದ್ರಯಾನ-2 ಜಾಗ ‘ತಿರಂಗ’ ಪಾಯಿಂಟ್ ಎಂದೂ ನಾಮಕರಣ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಿಂದ ನೇರವಾಗಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದು, ಇಸ್ರೋ ವಿಜ್ಞಾನಿಗಳನ್ನು, ತಂತ್ರಜ್ಞರನ್ನು, ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ವೇಳೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ -3 ಯಶಸ್ವಿಯಾದ ದಿನ ಆಗಸ್ಟ್ 23ರನ್ನು ಇನ್ನುಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.
ಅಲ್ಲದೇ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಪಾಯಿಂಟ್ ಎಂದು ಕರೆಯೋಣ ಎಂದು ತಿಳಿಸಿದರು. ಶಿವನಲ್ಲಿ ಮಾನವ ಶಕ್ತಿಯನ್ನು ರೂಪಿಸುವ ಶಕ್ತಿಯಿದೆ ಹಾಗಾಗಿ ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ ಎಂದು ಕರೆಯುವುದು ಸೂಕ್ತ ಎಂದರು.
ಇನ್ನು ಚಂದ್ರಯಾನ -2 ಪತನ ಸ್ಥಳಕ್ಕೆ ‘ತಿರಂಗ’ ಪಾಯಿಂಟ್ ಎಂದು ಹೆಸರಿಡೋಣ ಎಂದು ಹೇಳಿದರು. ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್ ಇನ್ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ. ವಿಜ್ಞಾನಿಗಳ ಸಾಧನೆಯನ್ನು ದೇಶದ ಪ್ರತಿಯೊಬ್ಬರೂ ತಿಳಿಯಬೇಕು. ಯುವಪೀಳಿಗೆಗಳಿಗೆ ಇದರಿಂದ ಪ್ರೇರಣೆ ಸಿಗಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ