ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನ ಬದುಕಿನಲ್ಲಿ ಪ್ರತಿಯೊಂದರಲ್ಲೂ ಸ್ಪರ್ಧೆಯೇ ತುಂಬಿದೆ. ಹೀಗಾಗಿ ಸ್ಪರ್ಧಾತ್ಮಕ ಲೋಕಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಬದಲಾಗುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಅದಕ್ಕೆ ಹೊರತಲ್ಲ ಎಂದು ಹಿರೇಬಾಗೇವಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಲೇಖಕಿ ಜಯಶ್ರೀ ಜೆ. ಅಬ್ಬಿಗೇರಿ ಹೇಳಿದರು.
ಸಮೀಪದ ಚಿಕ್ಕಹಟ್ಟಿಹೊಳಿಯ ಸರಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು .
ಮಕ್ಕಳು ಆಲೋಚನೆಯ ರೀತಿಯನ್ನು ಬದಲಿಸಿಕೊಳ್ಳಬೇಕು. ಹವ್ಯಾಸಗಳು ಹಣೆ ಬರಹವನ್ನು ಬದಲಿಸಬಲ್ಲವು. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಓದು ಎಂಬ ತಪಸ್ಸಿನ ಹಿಂದೆ ಬೆನ್ನು ಹತ್ತಬೇಕು. ಓದು ಎಲ್ಲ ಗೆಲುವಿಗೂ ಮೂಲ. ಅರಿವಿನ ಅಂತರಂಗವನ್ನು ತೆರೆದಿಡುವ ಸಾಧನ. ಇಷ್ಟವಿರುವ ವಿಷಯಗಳನ್ನು ಮಾತ್ರ ಓದಿ ಕಷ್ಟವೆನಿಸುವ ವಿಷಯಗಳನ್ನು ಪಕ್ಕಕ್ಕೆ ಸರಿಸಿದರೆ ಪರೀಕ್ಷೆಯ ಭಯ ಹೆಚ್ಚುವುದು ಮತ್ತು ವೈಫಲ್ಯ ಕಟ್ಟಿಟ್ಟ ಬುತ್ತಿ ಎಂದರು.
ಕಷ್ಟವೆನಿಸಿದ ವಿಷಯಗಳಲ್ಲೂ ಉತ್ತೀರ್ಣರಾಗಬೇಕೆಂದರೆ ಆಯಾ ವಿಷಯಗಳನ್ನು ಮೊದಲಿನಿಂದಲೇ ಶಿಕ್ಷಕರ ಸಹಾಯದಿಂದ ಓದಬೇಕು. ಅದು ಪರೀಕ್ಷೆಯ ಗೆಲುವಿಗೆ ಮುನ್ನುಡಿ ಬರೆಯುತ್ತದೆ. ಸ್ಪರ್ಧೆಯ ಮಹತ್ವದ ಬಗ್ಗೆ ಗ್ರಾಮೀಣ ಮಕ್ಕಳಿಗೆ ಅರಿವು ಮೂಡಿಸುವುದು ಅತ್ಯವಶ್ಯವಿದೆ. ಅವಕಾಶಗಳಿಗಾಗಿ ಕಾದು ಬಳಸಿಕೊಳ್ಳುವ ಜಾಣನಾಗುವುದಕ್ಕಿಂತ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬುದ್ಧಿವಂತರಾಗಿ. ಧೈರ್ಯದಿಂದ ಪರೀಕ್ಷೆ ಎದುರಿಸಿ ಗೆಲುವು ನೆರಳಿನಂತೆ ಹಿಂಬಾಲಿಸುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲಕ/ಕಿ ವೀರಾಗ್ರಣಿ, ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಅಲ್ಲದೇ ಅತ್ಯಧಿಕ ಅಂಕ ಗಳಿಸಿದ ಹಳೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸನ್ಮಾನ ಸ್ವೀಕರಿಸಿದ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕರಾದ ಗಿರೀಶ ನಾಯಕ ಅವರು ಮೊಬೈಲ್, ಟಿವಿಗಳಿಂದ ದೂರವಿರಿ. ಸೋಲಿನ ಬಗ್ಗೆ ಭಯ ಪಡದೇ ಪರೀಕ್ಷೆ ಎದುರಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಳೆದ ವರ್ಷ ಎಸ್. ಎಸ್. ಎಲ್. ಸಿ. ಪರೀಕ್ಷೆಯ ಕನ್ನಡ ಭಾಷೆಯಲ್ಲಿ ನೂರರಷ್ಟು ಫಲಿತಾಂಶ ತಂದ ಶಿಕ್ಷಕಿ ಬಿ. ಎ. ಬಾಳೆಕಾಯಿಯವರನ್ನು ಹಾಗೂ ಶಾಲೆಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್. ಡಿ. ಎಮ್. ಸಿ. ಅಧ್ಯಕ್ಷ ಸುರೇಶ ಸಣ್ಣಕ್ಕಿ ಹಾಗೂ ಪರಪ್ಪ ಹುಣಸಿಕಟ್ಟಿ, ಗೌಡಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಸುಶೀಲಾ ಎ.ಪಾಟೀಲ ವಿದ್ಯಾರ್ಥಿಗಳು ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ತರಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಆರ್. ಪಿ. ಬಡಿಗೇರ ಸ್ವಾಗತಿಸಿದರು. ಆರ್. ಎಮ್. ಭಜಂತ್ರಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿ. ಎಮ್. ಹುಕ್ಕೇರಿ. ವರದಿ ವಾಚಿಸಿದರು. ಅಂಜು. ಎ. ಪಿ. ವಂದಿಸಿದರು. ಎಸ್. ವ್ಹಿ. ಕಲ್ಮಠ ನಿರೂಪಿಸಿದರು. ಕೆ.ವಾಯ್. ಪಾಟೀಲ. ಕೀರ್ತಿ. ಹಿರೇಮಠ. ಮುಕ್ಕಣ್ಣವರ. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವು ಪೂಜಾರ, ಯಲ್ಲಪ್ಪ ಕೋಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ