*ಚನ್ನಮ್ಮನ ಕಿತ್ತೂರು ಉತ್ಸವ: ಅದ್ದೂರಿ ಉತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಶಾಸಕ ಬಾಬಾಸಾಹೇಬ ಪಾಟೀಲ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚನ್ನಮ್ಮನ ಕಿತ್ತೂರು ಉತ್ಸವ-2024 ಹಾಗೂ ಚನ್ನಮ್ಮನವರ 200 ನೇ ವಿಜಯೋತ್ಸವ ಕಾರ್ಯಕ್ರಮವನ್ನು ಅಚ್ವುಕಟ್ಟಾಗಿ ಆಯೋಜಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಉಪ ಸಮಿತಿಗಳ ಸದಸ್ಯರು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ತಿಳಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ (ಅ.7) ಜರುಗಿದ ಚನ್ನಮ್ಮನ ಕಿತ್ತೂರು ಉತ್ಸವ-2024 ಮತ್ತು ಚನ್ನಮ್ಮನವರ 200ನೇ ವಿಜಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚನ್ನಮ್ಮನ ಕಿತ್ತೂರು ಉತ್ಸವ-2024 ಕಾರ್ಯಕ್ರಮ ಯಶಸ್ವಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರಸಕ್ತ ಸಾಲಿನ ಉತ್ಸವವನ್ನು ಯಾವುದೇ ರೀತಿಯ ಲೋಪಗಳಾಗದಂತೆ ಯಶಸ್ವಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಮೂರು ದಿನಗಳ ಕಾಲ ಜರುಗಲಿರುವ ಉತ್ಸವದ ದಿನಗಳಂದು ಆಗಮಿಸುವ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೆ ಕೊರತೆ ಆಗಬಾರದು.
ಉತ್ಸವದ ಮೊದಲನೇ ದಿನ ಜರುಗಲಿರುವ ಮೆರವಣಿಗೆಯಲ್ಲಿ ಸಾಗುವ ಕಲಾವಿದರು, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಕಾರ್ಯಕ್ರಮಗಳ ದಿನದಂದು ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಯಾವುದೇ ಗೊಂದಲಗಳು ಆಗಬಾರದು. ರಾಷ್ಟ್ರೀಯ/ರಾಜ್ಯಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರುಗಳಿಗೆ ವೇದಿಕೆ ದೊರೆಯುವ ಹಾಗೆ ರೂಪುರೇಷೆಗಳನ್ನು ತಯಾರಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಕಿತ್ತೂರು ಉತ್ಸವ-2024 ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಚಿಸಲಾದ ವಿವಿಧ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳ ವಸತಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣ್ಯವ್ಯಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಆಗಮಿಸುವ ಕಲಾತಂಡಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.
ಮೂರು ದಿನಗಳ ಕಾಲ ಜರುಗಲಿರುವ ಚನ್ನಮ್ಮನ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ಉತ್ಸವದ ದಿನಗಳಂದು ಸೂಕ್ತ ಪೊಲಿಸ್ ಬಂದೋಬಸ್ತ ಮಾಡಲಾಗುವುದು ಎಂದರು.
ಉತ್ಸವದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮುಖ್ಯ ವೇದಿಕೆ ಸ್ಥಳಗಳಲ್ಲಿ ಪೋಲಿಸ್ ಭದ್ರತೆ ಒದಗಿಸಲಾಗುವದು. ಅಲ್ಲದೇ ಉತ್ಸವದ ಭದ್ರತೆಗೆ ಆಗಮಿಸುವ ಪೊಲಿಸ್ ಸಿಬ್ಬಂದಿಗಳಿಗೆ ವಸತಿ ಹಾಗೂ ಊಟೊಪಚಾರದ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಮೆರವಣಿಗೆ, ರೂಪಕಗಳು, ಏರ್ ಶೋ, ಸಾರಿಗೆ, ಗ್ರಾಮೀಣ ಕ್ರೀಡೆ, ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ, ಜಲ ಕ್ರೀಡೆಗಳ ಆಯೋಜನೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು ಇದುವರೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿವರಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ