ಪ್ರಕಾಶ ಹುಕ್ಕೇರಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಕ್ಷೇತ್ರದ ಮತದಾರರ ಸೌಭಾಗ್ಯ – ಲಕ್ಷ್ಮೀ ಹೆಬ್ಬಾಳಕರ್
ಶಿಕ್ಷಕರ ಸಮಸ್ಯೆಗಳನ್ನು ಪಟ್ಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜನಸಾಮಾನ್ಯರ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಧಾನಪರಿಷತ್ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರ ಚುನಾವಣಾ ಪ್ರಚಾರದ ನಿಮಿತ್ತ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಹುಡುಕಿ ಹುಡುಕಿ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದೆ. ಸುಮ್ಮನೇ ನೆಪ ಮಾತ್ರಕ್ಕೆ ಕೆಲಸ ಮಾಡುವುದಲ್ಲ, ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವನ್ನು ಮಾಡುತ್ತೇವೆ. ವೈಜ್ಞಾನಿಕವಾಗಿ ಅನುಷ್ಠಾನಗೊಳಿಸುವುದು ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆ ಎಂದರು.
ಪ್ರಕಾಶ ಹುಕ್ಕೇರಿ ಅವರು ನನ್ನ ಆದರ್ಶ ಎಂದು ಸದಾ ಹೇಳುತ್ತ ಬಂದಿದ್ದೇನೆ. ಪ್ರಸ್ತುತ ಅವರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಕ್ಷೇತ್ರದ ಮತದಾರರ ಸೌಭಾಗ್ಯ ಎಂದರು.
ಶಿಕ್ಷಕರ ಸಮಸ್ಯೆಗಳ ಪಟ್ಟಿ
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸರಕಾರದ ಮಟ್ಟದಲ್ಲಿ ಪ್ರಕಾಶ ಹುಕ್ಕೇರಿ ಅವರು ನಮ್ಮ ಧ್ವನಿಯಾಗಿ ಕೆಲಸ ಮಾಡಬೇಕೆಂದು ಅನೇಕರು ಕೇಳಿಕೊಂಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಹಲವಾರು ಶಿಕ್ಷಕರ ಜತೆ ಸಮಾಲೋಚನೆ ಮಾಡಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಶಿಕ್ಷಕರ ವರ್ಗಾವಣೆಯಲ್ಲಿ ಬದಲಾವಣೆ ಆಗಬೇಕಿದೆ. ಎಷ್ಟೇ ಪ್ರಯತ್ನ ಮಾಡಿದರೂ ವರ್ಗಾವಣೆ ಸಮರ್ಪಕವಾಗಿ ಆಗುತ್ತಿಲ್ಲ. ಪ್ರೌಢ ಶಾಲಾ ಶಿಕ್ಷಕರ ಕಾಲಮಿತಿ ಬಡ್ತಿ ಮುಂದುವರೆಸಬೇಕು. ಪ್ರತಿ ಕ್ಲಸ್ಟರ್‌ಗೆ ಒಬ್ಬ ಎಫ್‌ಡಿಎ ನೇಮಕ ಆಗಬೇಕು. ಪ್ರೌಢ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ತ್ವರಿತ ಗತಿಯಲ್ಲಿ ಭಡ್ತಿ ನೀಡುವಂತಾಗಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಅನುಮತಿ ನೀಡುವುದು, ನವೀಕರಣ ಮಾನ್ಯತೆ ನೀಡುವುದು, ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಕೇಂದ್ರ ಸರಕಾರಕ್ಕೆ ಸಮಾನವಾಗಿ ಶಿಕ್ಷಕರಿಗೆ ವೇತನ ನೀಡುವುದು ಸರಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು, ಪ್ರಭಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡುವುದು, ಅನುದಾನಿತ ಶಾಲೆಯ ಶಿಕ್ಷಕರಿಗೆ ವೈದ್ಯಕೀಯ ಭತ್ಯೆ ನೀಡುವುದು,. ಅನುದಾನಿತ ಶಾಲಾ ಮಕ್ಕಳಿಗೂ ಸಮವಸ್ತ್ರ, ಲ್ಯಾಪ್‌ಟಾಪ್ ಬಹುಮಾನ ನೀಡುವುದು ಮೊದಲಾದ ಪ್ರಮುಖ ಬೇಡಿಕೆಗಳು ಈಡೇರಬೇಕಿದೆ. ಈ ಎಲ್ಲ ವಿಚಾರಗಳನ್ನು ಪ್ರಕಾಶ ಹುಕ್ಕೇರಿ ಅವರಿಗೆ ತಲುಪಿಸಿ, ಅವರ ಜತೆ ಇವುಗಳ ಅನುಷ್ಠಾನಕ್ಕಾಗಿ ನಾವೂ ಹೋರಾಟ ಮಾಡುತ್ತೇವೆ ಎಂದರು.
ಕ್ಷೇತ್ರದಿಂದ ನಿಮ್ಮ ಪ್ರತಿನಿಧಿಯನ್ನು ಬೆಂಗಳೂರಿಗೆ ಕಳುಹಿಸುವ ಸಂದರ್ಭ ಇದು. ಶಿಕ್ಷಣದಲ್ಲಿ ಆರೋಗ್ಯದಲ್ಲಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಸಹೋದರಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳುತ್ತಾರೆ. ಶಿಕ್ಷಕರು ಹಾಗೂ ಶಾಲೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿರುವುದಿಲ್ಲ. ಅಂತಹ ಪವಿತ್ರ ಕ್ಷೇತ್ರ ಇದು. ಪ್ರಕಾಶ ಹುಕ್ಕೇರಿ ಅವರು ಗ್ರಾಪಂದಿಂದ ಹಿಡಿದು ಸಂಸತ್‌ವರೆಗೆ ರಾಜಕೀಯ ಅನುಭವ ಹೊಂದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಒಂದು ಪ್ರಬುದ್ಧ ವ್ಯಕ್ತಿತ್ವ ನಮ್ಮ ಶಿಕ್ಷಕರ ಕ್ಷೇತ್ರಕ್ಕೆ ದೊರಕುವ ಅಪೂರ್ವ ಅವಕಾಶ ಒದಗಿ ಬಂದಿದೆ. ಬಿಜಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಸೌಭಾಗ್ಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ, ಸುನೀಲ ಸಂಕ, ಮಾಜಿ ಸಚಿವ ಎ.ಬಿ.ಪಾಟೀಲ, ಶರಣಪ್ಪ ಮಂಟೂರ್, ಮಾಜಿ ವಿಧಾನ ಪರಿಷತ್ ಸದ್ಯಸರು, ಚಿಕ್ಕೋಡಿ ಬ್ಲಾಕ್ ಅಧ್ಯಕ್ಷ ಲಕ್ಷ್ಣಣರಾವ್ ಚಿಂಗಳೆ, ಸಂದೀಪ್ ಬೆಳಗಲಿ ಮೊದಲಾದವರಿದ್ದರು.
ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಹಿನ್ನೆಲೆ: ಅಡಿಪಾಯದ ಕಾಂಕ್ರೀಟ್ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಪೂಜೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ