Belagavi NewsBelgaum NewsPolitics

*ಜಮೀನು ಕಾಪಾಡಿಕೊಳ್ಳಿ: ರಿಯಲ್ ಎಸ್ಟೇಟ್ ಗೆ ಮಾರಿಕೊಳ್ಳಬೇಡಿ: ರೈತರಿಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕಿವಿಮಾತು*

ಪ್ರಗತಿವಾಹಿನಿ ಸುದ್ದಿ: ಕೃಷಿ ನಮ್ಮ ದೇಶದ ಬೆನ್ನೆಲುಬು, ದೇಶದ ಆರ್ಥಿಕತೆ ಕೃಷಿಯ ಮೇಲೆಯೇ ಅವಲಂಭಿಸಿದೆ. ರಿಯಲ್ ಎಸ್ಟೇಟ್ ಗೆ ರೈತರು ತಮ್ಮ ಜಮೀನನ್ನು ಕಾಪಾಡಿಕೊಳ್ಳಬೇಕು. ಮುಂದೆ ಉತ್ತಮ ಬೆಲೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ವಿಜಯ ಕರ್ನಾಟಕ ದಿನಪತ್ರಿಕೆ ವತಿಯಿಂದ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಮಟ್ಟದ 7ನೇ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗಾಗಿ ನಡೆಯುತ್ತಿರುವ ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದರು‌.

ನಮ್ಮ ದೇಶದಲ್ಲಿ ಶೇಕಡ 70ಕ್ಕೂ ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಕೃಷಿ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈದು, ಬೆಳಕಿಗೆ ಬಾರದ ರೈತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಪತ್ರಿಕೆಯ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

Home add -Advt

ವಿಜಯ ಕರ್ನಾಟಕ ಮಾಧ್ಯಮ ಸಂಸ್ಥೆಯು ಕಳೆದ ಆರು ವರ್ಷಗಳಿಂದ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಇದು 7ನೇ ವರ್ಷದ ಕಾರ್ಯಕ್ರಮ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಾಧಕ ರೈತರನ್ನು ಹುಡುಕಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದವರಿಗೆ ರಾಜ್ಯಮಟ್ಟದಲ್ಲೂ ಸ್ಪರ್ಧಿಸಲು ಅವಕಾಶ ಅವಕಾಶ ಇರುವುದು ಸಂತಸ ಸಂಗತಿ ಎಂದರು. ‌

ಸರ್ಕಾರ ಅಥವಾ ಸಂಘ ಸಂಸ್ಥೆಗಳು ಯಾವುದೇ ಇರಲಿ ರೈತರಿಗೆ ಪ್ರೋತ್ಸಾಹ ನೀಡಿದಾಗ ಅವರು ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ, ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇಂದಿನ ಯುವಜನರು ಕೃಷಿಯಿಂದ ದೂರ ಸರಿದು ನಗರಗಳತ್ತ ಆಕರ್ಷಿತರಾಗುತ್ತಿದ್ದಾರೆ‌. ಜೊತೆಗೆ, ಕೃಷಿ ಭೂಮಿಗಳನ್ನು ರಿಯಲ್ ಎಸ್ಟೇಟ್ ಗೆ ಪರಿವರ್ತಿಸುತ್ತಿರುವುದು ಕೂಡ ಸಕಾರಾತ್ಮಕ ಬೆಳವಣಿಗೆಯಲ್ಲ. ಆಧುನಿಕ ಯಂತ್ರೋಪಕರಣಗಳನ್ನು ಶೋಧಿಸಿ, ಕೃಷಿ ಕೆಲಸಗಳನ್ನು ಸರಳಗೊಳಿಸಿದಾಗ ಹೆಚ್ಚಿನ ಜನರು ಕೃಷಿಯಲ್ಲಿ ತೊಡಗಬಹುದು ಎಂದು ತಿಳಿಸಿದರು ‌

ಕೃಷಿ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹವಾಮಾನ ಬದಲಾವಣೆ ಕೂಡ ಸವಾಲಾಗಿದೆ. ಇಂತಹ ಸವಾಲುಗಳನ್ನು ಎದುರಿಸಲು ಸಂಶೋಧನೆಗಳಾಗಬೇಕಿದೆ. ಸರ್ಕಾರಗಳು ಪ್ರತಿ ವರ್ಷ ಬಜೆಟ್ ನಲ್ಲಿ ಕೃಷಿಗೆ ಸಾಕಷ್ಟು ಅನುದಾನ ಮೀಸಲಿಟ್ಟರೂ ನಿರೀಕ್ಷಿತ ಮಟ್ಟದಲ್ಲಿ ಅವುಗಳು ಸದುಪಯೋಗವಾಗದಿರುವುದು ಬೇಸರದ ಸಂಗತಿ ಎಂದರು.

ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಕಾಲೇಜುಗಳು ರೈತರ ಹೊಲಕ್ಕೆ ಇಳಿದು ಸಂಶೋಧನೆ ಮಾಡುವ ಕೆಲಸ ಮಾಡಬೇಕಿದೆ. ನಮ್ಮದು ಸಕ್ಕರೆ ಕಾರ್ಖಾನೆ ಇದೆ, ಅದರ ಮೂಲಕ ಕೃಷಿಕರಿಗೆ ಪ್ರೋತ್ಸಾಹಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತ ಬಂದಿದ್ದೇವೆ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಜನ ಕೃಷಿ ಸಾಧಕರಿದ್ದಾರೆ. ದೊಡ್ಡ ದೊಡ್ಡ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಲ್ಪಡದೇ ಎಲೆಮರೆಯ ಕಾಯಿಯಂತೆ ಇದ್ದಾರೆ. ಅಂತವರನ್ನು ಇಂದು ಗುರುತಿಸಲಾಗಿದೆ. ಇದೇ ರೀತಿ ಮಾಧ್ಯಮಗಳು ಕೃಷಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ ಕೊಟ್ಟಾಗ, ಮಾರ್ಗದರ್ಶನ ಮಾಡಿದಾಗ, ಈ ರೀತಿ ಸಾಧಕರನ್ನು ಜಗತ್ತಿಗೆ ಪರಿಚಯಿಸಿದಾಗ ಯುವಕರೂ ಕೃಷಿಯ ಕಡೆಗೆ ಆಕರ್ಷಿತರಾಗುತ್ತಾರೆ ಎಂದರು‌.

ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರೀಯವಾಗಬೇಕಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಮುಂದಿನ ದಿನಗಳಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯಾದ್ಯಂತ ಕನ್ನಡ ಹಬ್ಬ ಕಾರ್ಯಕ್ರಮದ ಮೂಲಕ ಕನ್ನಡಿಗರ ಅಸ್ಮಿತೆ ಎತ್ತಿಹಿಡಿಯುವ ಕೆಲಸವನ್ನೂ ವಿಜಯ ಕರ್ನಾಟಕ ಮಾಡುತ್ತ ಬಂದಿದೆ. ಕಳೆದ ವರ್ಷವೂ ಈ ಮಾಧ್ಯಮದಿಂದ ಬೆಳಗಾವಿ ಅಭಿವೃದ್ಧಿ ಶೃಂಗದಿಂದ ಗಡಿ ಜಿಲ್ಲೆ ಪ್ರಗತಿಗೆ ಹೊಸ ದಿಕ್ಸೂಚಿ ಸಿಕ್ಕಿದೆ ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button