ಛತ್ರಪತಿ ಶಿವಾಜಿ ಮೂರ್ತಿ ಕುಸಿತ ಪ್ರಕರಣ ಅತ್ಯಂತ ಖೇದಕರ ; ಪ್ರಧಾನಿ, ಸಿಎಂ, ಡಿಸಿಎಂ ಜನರ ಕ್ಷಮೆ ಕೇಳಬೇಕು: ಮೃಣಾಲ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರದ ಸಿಂದೂದುರ್ಗ ಜಿಲ್ಲೆಯ ಮಾಲ್ವನ್ ಕೋಟೆಯಲ್ಲಿ ನಿರ್ಮಿಸಲಾಗಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮೂರ್ತಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಜನತೆಯ ಕ್ಷಮೆ ಕೇಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯಿಂದಲೇ ಮೂರ್ತಿ ಕುಸಿದಿದೆ. ಇದು ಕೇವಲ ಮೂರ್ತಿ ಕುಸಿತವಲ್ಲ, ನಮ್ಮ ಸಂಸ್ಕೃತಿ, ಪರಂಪರೆಗೆ ಮಾಡಿದ ಅವಮಾನ. ಕೋಟ್ಯಂತರ ಶಿವಾಜಿ ಭಕ್ತರಿಗೆ ಮಾಡಿದ ದ್ರೋಹ ಎಂದು ಹೇಳಿದರು.
ಗುತ್ತಿಗೆದಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬಲಗೈಬಂಟನಾಗಿದ್ದ. ಯಾವುದೇ ಕೆಲಸ ಮಾಡುವಾಗ ಭಕ್ತಿಯಿಂದ ಮಾಡಬೇಕು. ಅದರಲ್ಲಿ ರಾಜಕೀಯ ಇರಬಾರದು. ಹಿಂದುತ್ವದ ಬಗೆಗೆ, ಶಿವಾಜಿ ಮಹಾರಾಜರ ಬಗೆಗೆ ಬಹಳ ಮಾತನಾಡುವ ಬಿಜೆಪಿಯವರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣದಲ್ಲಿ ಈ ರೀತಿ ಭ್ರಷ್ಟಾಚಾರ, ಕಳಪೆ ಕಾಮಗಾರಿ ಮಾಡಿರುವುದು ನಾಚಿಕೆಗೇಡು. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಮೂರ್ತಿಯನ್ನು ಉದ್ಘಾಟನೆ ಮಾಡಿದ್ದಾರೆ. ತಕ್ಷಣ ಪ್ರಧಾನಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕ್ಷಮೆ ಕೇಳಬೇಕು ಎಂದು ಮೃಣಾ ಹೆಬ್ಬಾಳಕರ್ ಆಗ್ರಹಿಸಿದರು.
ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ 55 ಅಡಿ ಎತ್ತರದ ಶಿವಾಜಿ ಮೂರ್ತಿಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ. ತಳಪಾಯದಿಂದ ಹಿಡಿದು ಸಂಪೂರ್ಣ ಕಾಮಗಾರಿಯಲ್ಲಿ ಬಹಳ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಆದರೆ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಬಿಜೆಪಿಯವರು ಯಾವ ರೀತಿಯಲ್ಲಿ ರಾಜಕೀಯ ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಅವರೇ ಸ್ಥಾಪಿಸಿದ ಮೂರ್ತಿಗೆ ಇಂತಹ ದುಸ್ಥಿತಿ ಬಂದಿರುವುದು ಖೇದಕರ ಎಂದು ಮೃಣಾಲ ಹೆಬ್ಬಾಳಕರ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಕೆಡಿಪಿ ಸದಸ್ಯ ಬಸವರಾಜ ಮ್ಯಾಗೋಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನೋಹರ ಬೆಳಗಾಂವ್ಕರ್, ರಾಜಹಂಸಗಡ ಶಿವಾಜಿ ಮೂರ್ತಿಯ ಸ್ಥಾಪನೆಯ ಕೆಲಸ ಮಾಡಿರುವ ಸ್ಟ್ರಕ್ಚರಲ್ ಎಂಜಿನಿಯರ್ ವಿನಾಯಕ ಮುತಗೇಕರ್, ಗುತ್ತಿಗೆದಾರ ಸಚಿನ್ ಸಾಮಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ