*ಉತ್ತಮ ಮಾರುಕಟ್ಟೆಯಿಂದ ಗೃಹ ಹಾಗೂ ಗುಡಿ ಕೈಗಾರಿಕೆಗಳ ಆರ್ಥಿಕ ಅಭಿವೃದ್ಧಿ ಸಾಧ್ಯ : ಸಿಎಂ*
ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಒದಗಿಸುವ ಮೂಲಕ ಗುಡಿ ಹಾಗೂ ಗೃಹ ಕೈಗಾರಿಕೆಗಳ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಸೃಜನಶೀಲ ಸೃಷ್ಟಿಗೆ ಅವಕಾಶವಿರುವ ವಸ್ತುಪ್ರದರ್ಶನದಿಂದ ಸ್ವಸಹಾಯ ಸಂಘಗಳ ಉತ್ಪನ್ನಗಳ ಮೂಲಕ ಸ್ತ್ರೀ ಶಕ್ತಿಯ ಪರಿಚಯ ನನಗಾಯಿತು. ಇಂತಹ ಪ್ರಯತ್ನ ನಮ್ಮ ರಾಜ್ಯದಲ್ಲಾಗಿದ್ದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕನ್ನಡಿಗರೂ ಗೌರವಯುತವಾಗಿ ದುಡಿಯಬೇಕೆಂಬುದು ಸರ್ಕಾರದ ಉದ್ದೇಶ. ಕಾಯಕಕ್ಕೆ ಇಚ್ಛಾಶಕ್ತಿಯ ಜೊತೆಗೆ ಅವಕಾಶಗಳು ಬೇಕು. ದುಡಿಯುವವರಿಗೆ ಅವಕಾಶವನ್ನು ಒದಗಿಸುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯ. ರಾಜ್ಯದ ಪ್ರಗತಿಗಾಗಿ, ಪ್ರತಿಯೊಂದು ಕುಟುಂಬವೂ ಕೂಡ ಸ್ವಾಭಿಮಾನ ಹಾಗೂ ಸಂತೋಷದ ಬದುಕನ್ನು ನಡೆಸುವ ಸಲುವಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಸಹಕಾರ ನೀಡಲಿದೆ ಎಂದರು.
ಇಡೀ ದೇಶದಲ್ಲಿ ತಲಾವಾರು ಆದಾಯದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕೇವಲ 30 % ಜನ ತಲಾವಾರು ಆದಾಯದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಉಳಿದ 70% ಜನ ಬದುಕಿನ ನಿರಂತರತೆಗೆ ಕೆಲಸ ಮಾಡುತ್ತಿದ್ದಾರೆ. ಈ 70% ಜನ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಸರ್ಕಾರ ಸಹಕಾರ ನೀಡಲಿದೆ. ಈ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣದ ಮೂಲಕ ರಾಜ್ಯದ ಜಿಡಿಪಿಗೆ ಸಹಾಯವಾಗುತ್ತದೆ. ರಾಜ್ಯವನ್ನು ಕಟ್ಟಲು ಪ್ರತಿಯೊಬ್ಬರಿಗೂ ದುಡಿಯುವ ಅವಕಾಶ ನೀಡಬೇಕು. ದುಡಿಯುವವರ ಆದಾಯ ಹೆಚ್ಚಳವಾದಾಗ, ವ್ಯಾಪಾರ ಹೆಚ್ಚಾಗಿ ಬೇರೆ ರೂಪದಲ್ಲಿ ತೆರಿಗೆ ಬರುತ್ತದೆ. ರಾಜ್ಯದ ಒಟ್ಟು ತಲಾವಾರು ಆದಾಯವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.
*ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಆದ್ಯತೆ :*
ಕುಶಲಕರ್ಮಿಗಳ ಆದಾಯದ ಜೊತೆಗೆ ರಾಜ್ಯದ ಆದಾಯವೂ ಜಾಸ್ತಿಯಾಗುತ್ತದೆ. ಈ ಮೇಳದ ಉದ್ದೇಶ ಹೆಚ್ಚಿನ ಕುಶಲಕರ್ಮಿಗಳಿಗೆ ಕೆಲಸ ಸಿಗಬೇಕು. ಅವರು ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಮಹಿಳೆಯ ಆರ್ಥಿಕ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ನಮ್ಮ ಗುರಿ ಗ್ರಾಮಗಳಲ್ಲಿರುವ ಮಹಿಳೆಯರ ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆ. ಇದನ್ನು ನಾವು ಕೌಶಲ್ಯಪೂರ್ಣವಾಗಿ ಮಾಡಬೇಕು. ಸಣ್ಣಪುಟ್ಟ ಯಂತ್ರಗಳು, ವ್ಯಾಪಾರ ಪ್ರಾರಂಭಿಸಲು ಹಣಕಾಸಿನ ನೆರವು ನೀಡುವಂತಹ ಕೆಲಸವನ್ನು ಮಾಡಬೇಕು. ಆಗ ನಾವು ಹಾಕುವ ಬಂಡವಾಳಕ್ಕೆ ಪ್ರತಿಫಲ ಇರುತ್ತದೆ. ಇದು ಸ್ತ್ರೀ ಶಕ್ತಿ. ಇದನ್ನು ಸಾಧಿಸುವ ಸಲುವಾಗಿ ಎಸ್.ಸಿ/ಎಸ್.ಟಿ, ಹಿಂದುಳಿದ ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಅವರಿಂದ ಉತ್ಪಾದನೆ ಮಾಡಿಸುವುದಲ್ಲದೆ, ಮಾಡುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಮಾರುಕಟ್ಟೆಯ ಲಾಭದಲ್ಲಿ ಅವರಿಗೆ ಪಾಲು ಕೊಡುವ ಕಲಸವನ್ನು ಮಾಡುತ್ತೇವೆ ಎಂದರು.
*ಮಧ್ಯವರ್ತಿಗಳ ನಿಯಂತ್ರಣ:*
ನೇರವಾದ ಮಾರುಕಟ್ಟೆ ಸಂಪರ್ಕ ಮಾಡಿಕೊಟ್ಟರೆ, ಮದ್ಯವರ್ತಿಗಳನ್ನು ತಡೆಗಟ್ಟಬಹುದು. ಮಹಿಳೆಯರ ಬಗ್ಗೆ ಹೆಚ್ಚಿನ ನಂಬಿಕೆ ಇರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಪುರುಷರಿಗಿಂತ ಹೆಚ್ಚು ದುಡಿಯುತ್ತಾರೆ. ನೈಸರ್ಗಿಕವಾಗಿ ಹೆಚ್ಚು ಶ್ರಮಜೀವಿಗಳು, ಪ್ರಾಮಾಣಿಕರು. ಹೀಗಾಗಿ ಕಾರ್ಯಕ್ರಮ ಮತ್ತು ಬಂಡವಾಳವನ್ನು ಅವರಿಗಾಗಿಯೇ ರೂಪಿಸಲಾಗುತ್ತದೆ. ಬ್ರಾಂಡಿಂಗ್ ಮಾಡಲಾಗುತ್ತದೆ. ನಮ್ಮ ಮಹಿಳೆಯರು ತಯಾರು ಮಾಡಿರುವ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ದೊರೆಯಬೇಕು ಎಂದರು.
ಪ್ರಾಯೋಗಿಕವಾಗಿ 7500 ಸ್ತ್ರೀಶಕ್ತಿ ಸಂಘಗಳಿಗೆ ಮೈಕ್ರೋ ವ್ಯವಹಾರಕ್ಕಾಗಿ 1 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಅದು ಯಶಸ್ವಿಯಾದರೆ ರಾಜ್ಯದ ಎಲ್ಲಾ ಸ್ತ್ರೀಶಕ್ತಿ ಸಂಘಗಳಿಗೆ ಅನುದಾನ ನೀಡಲಾಗುವುದು. ಶ್ರಮಕ್ಕೆ ಯಾವಾಗಲೂ ಯಶಸ್ಸು ಸಿಕ್ಕೇಸಿಗುತ್ತದೆ. ನೀವು ಶ್ರಮ ವಹಿಸಿ, ನಿಮ್ಮ ಶ್ರಮಕ್ಕೆ, ಬೆವರಿನ ಹನಿಗೆ ನಾವು ಬೆಲೆ ಸಿಗುವಂತೆ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.
ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಮಳಿಗೆಯೊಂದರಲ್ಲಿ 600 ರೂ. ಮೊತ್ತದ ಚನ್ನಪಟ್ಟಣ ಗೊಂಬೆಗಳ ಆಟಿಕೆಗಳನ್ನು ಖರೀದಿಸಿರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ