ಮದ್ಯದಂಗಡಿಗೆ ಕಿಂಡಿ ಕೊರೆದು ಕಳ್ಳತನ ಮಾಡಿದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಕೊರೊನಾ ಲಾಕ್ ಡೌನ್ ನಿಂದಾಗಿ ಮದ್ಯದಂಗಡಿಗಳು ಬಂದ್ ಆಗಿದ್ದು, ಮದ್ಯ ಪ್ರಿಯರಿಗೆ ಸಂಕಷ್ಟ ಎದುರಾಗಿದೆ. ಕೆಲವೆಡೆ ಅಂಗಡಿ ಮಾಲೀಕರೇ ಮದ್ಯದಂಗಡಿಗೆ ಕನ್ನ ಹಾಕುತ್ತಿದ್ದರೆ, ಇನ್ನು ಕೆಲಾವೆಡೆ ಕಿಡಿಗೇಡಿಗಾಳು ಈ ಕೃತ್ಯ ಎಸಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಕಿಂಡಿ ಕೊರೆದ ಕಳ್ಳರು ಮದ್ಯ ಕಳವು ಮಾಡಿ ಪರಾರಿಯಾಗಿದ್ದಾರೆ.

ಬಾರ್ ಅಂಡ್ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿರುವ ಖದೀಮರು, ಬಾರ್ ಹಿಂಭಾಗದಲ್ಲಿ ಗೋಡೆಗೆ ಕಿಂಡಿಕೊರೆದು ಮದ್ಯ ಕಳವು ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ನಂದಿಗಿರಿಧಾಮ ಪಿಎಸ್‍ಐ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಏಪ್ರಿಲ್ 15ರಂದು ಚಿಕ್ಕಬಳ್ಳಾಪುರ ನಗರದಲ್ಲೂ ಸಹ ಬಾರ್ ಗೋಡೆ ಕೊರೆದು ಮದ್ಯ ಕಳವು ಮಾಡಲಾಗಿತ್ತು. ನಂತರ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈ ಹುಣಸೇನಹಳ್ಳಿ ಹಾಗೂ ಜೆ ವೆಂಕಟಾಪುರದ ಬಳಿಯ ಬಾರ್‌ಗಳಲ್ಲೂ ಕಳ್ಳತನ ಮಾಡಲಾಗಿತ್ತು. ಈಗ ರಂಗಸ್ವಾಮಿ ಎಂಬವರಿಗೆ ಸೇರಿದ ಗೋಲ್ಡನ್ ಬಾರ್‍ನಲ್ಲಿ ಮದ್ಯ ಕಳವು ಮಾಡಲಾಗಿದೆ.

ಇನ್ನು ಲಾಕ್‍ಡೌನ್ ನಡುವೆ ಬಾರ್‌ಗಳು ಮುಚ್ಚಿದ್ರೂ 100 ರೂ. ಮದ್ಯವನ್ನು 1,000 ರೂ.ಗೆ ಅಕ್ರಮವಾಗಿ ಕದ್ದು ಮುಚ್ಚಿ ಮಾರಾಟವಾಗುತ್ತಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button