ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಉದ್ಘಾಟನೆಗೆ ಸಜ್ಜಾಗಿದ್ದ ರಾಜ್ಯ ಹೆದ್ದಾರಿ ಸೇತುವೆಯೊಂದು ಕುಸಿದುಬಿದ್ದಿರುವ ಘಟನೆ ಚಿಕ್ಕಮಗಳೂರಿನಿಂದ 40 ಕೀಲೋ ಮೀಟರ್ ದೂರವಿರುವ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಸಿದು ಬಿದ್ದ ಸೇತುವೆಯನ್ನು ರಾತ್ರೋ ರಾತ್ರಿ ಅಧಿಕಾರಿಗಳು ಜೆಸಿಬಿ ಮೂಲಕ ಸ್ವಚ್ಛ ಮಾಡಿಸಿದ್ದಾರೆ. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು, ಶೃಂಗೇರಿ, ಹೊರನಾಡು, ಕಳಸ, ಕೊಪ್ಪ, ಎನ್ಆರ್ ಪುರ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಸಂಪರ್ಕ ಕಲ್ಲಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಬಸರವಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾಗುತ್ತಿದ್ದು, ಸೇತುವೆ ಕೆಲಸ ಶೇಕಡಾ 90ರಷ್ಟು ಮುಗಿದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲು ಸಿದ್ದತೆಗಳು ನಡೆದಿತ್ತು.
ಇದೇ ರಾಜ್ಯ ಹೆದ್ದಾರಿಯಲ್ಲಿ ಸದ್ಯ ಐದಾರು ಸೇತುವೆಗಳ ಕಾಮಗಾರಿ ಕೂಡ ನಡೆಯುತ್ತಿದ್ದು, ಈ ಕಾಮಗಾರಿಗಳು ಎಷ್ಟರಮಟ್ಟಿಗೆ ಗಟ್ಟಿಯಾಗಿರಬಹುದು ಎಂಬುದು ಗ್ರಾಮಸ್ಥರ ಅತಂಕವಾಗಿದೆ.
ಪ್ರತಿದಿನ ಸಾವಿರಾರು ಜನರು ಓಡಾಡುವ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯೊಂದು ರಾತ್ರೋ ರಾತ್ರಿ ಕುಸಿದು ಬಿದ್ದಿದ್ದು, ಬೆಳಗಾಗುವಷ್ಟರಲ್ಲಿ ಅವಷೇಷಗಳೂ ಇಲ್ಲದಂತೆ ಸ್ವಚ್ಛಗೊಳಿಸಿರುವ ಅಧಿಕಾರಿಗಳ ಕ್ರಮ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ