*ಈ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ಬರೋಬ್ಬರಿ 1,354 ಬಾಲಗರ್ಭಿಣಿಯರು ಪತ್ತೆ: ಬೆಚ್ಚಿ ಬೀಳುವಂತಿದೆ ಆರೋಗ್ಯ ಇಲಾಖೆ ನೀಡಿದ ವರದಿ*

ಆಪ್ರಗತಿವಾಹಿನಿ ಸುದ್ದಿ: ರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶವೊಂದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 1,354 ಬಾಲಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಇಲಾಖೆಯ ಆರ್‌ಸಿಎಚ್ (RCH) ಪೋರ್ಟಲ್ ನೀಡಿರುವ ಅಂಕಿಅಂಶಗಳ ಪ್ರಕಾರ ಈ ಮಾಹಿತಿ ಲಭ್ಯವಾಗಿದೆ. ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಪೋಕ್ಸೋ ಕೇಸ್ಗಳ ಸಂಖ್ಯೆ ಕೇವಲ 674. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ. ಬಾಲ್ಯ ವಿವಾಹ, ಪ್ರೀತಿಯ ಜಾಲ, ಮತ್ತು ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾಅರೆ ಎಂಬುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ.
ಲೋಕಾಯುಕ್ತ ಅಧಿಕಾರಿಗಳು ಕೆಲ ದಿನಗಳ ಹಿಂದೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದಾಗ ಆಘಾತಕಾರಿ ವಿಷಯಗಳು ಬಹಿರಂಗವಾಗಿತ್ತು. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಅಕ್ರಮ ಸ್ಕ್ಯಾನಿಂಗ್ ದಂಧೆಯ ಜಾಲವೇ ಇದೆ ಎಂಬುದು ಬೆಳಕಿಗೆ ಬಂದಿದೆ.
ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದೀಗ ಬಾಲಗರ್ಭಿಣಿಯರ ಪ್ರಕರಣದಿಂದ ಮತ್ತೊಂದು ಶಾಕ್ ನೀಡಿದೆ.




