*ಚೈಲ್ಡ್ ಹೋಂ ನಲ್ಲಿ ಬೆಳೆದ ಮಕ್ಕಳು ಐಎಎಸ್. ಐಪಿಎಸ್ ಆಗಬೇಕು: ಸಿಇಓ ರಾಹುಲ್ ಶಿಂಧೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಕ್ಕಳ ಪಾಲನೆ ಪೋಷಣೆಗೆ ಚೈಲ್ಡ್ ಹೋಂ ಸಿಬ್ಬಂದಿ ಮತ್ತು ಎನ್.ಜಿ.ಓ ಗಳು ಮಾಡುತ್ತಿರುವ ಕಾರ್ಯ ಪ್ರಶಂಸನೀಯ. ಚೈಲ್ಡ್ ಹೋಂ ನಲ್ಲಿ ಬೆಳೆದ ಮಕ್ಕಳು ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳಾಗಬೇಕೆಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯಕಾರಿ ಅಧಿಕಾರಿ ರಾಹುಲ್ ಶಿಂಧೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಹಾಗೂ ಮಹೇಶ್ ಫೌಂಡೇಶನ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಮಿಷನ್ ವಾತ್ಸಲ್ಯ ಯೋಜನೆ, ಬಾಲ ನ್ಯಾಯ ಕಾಯ್ದೆ, ದತ್ತು ನಿಯಮಗಳು, ಪೋಕ್ಸೋ ಕಾಯ್ದೆ, ಮತ್ತು ಬಾಲ್ಯವಿವಾಹದ ಕುರಿತು ಹಮ್ಮಿಕೊಂಡ ಮೂರು ದಿನಗಳ ಕಾರ್ಯಾಗಾರಕ್ಕೆ ಇಂದು ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ಸಿಂಧೆ ಅವರು, ಮಕ್ಕಳ ಪಾಲನೆ ಪೋಷಣೆ ಮಾಡುವುದು ಒಂದು ಮಹತ್ತರ ಕರ್ತವ್ಯವಾಗಿದೆ. ಚೈಲ್ಡ್ ಹೋಂ ನಲ್ಲಿರುವ ಮಕ್ಕಳಿಗೆ ಸಮಸ್ಯೆಗಳು ಎದುರಾದಾಗ ಅವುಗಳನ್ನು ಪರಿಹರಿಸಲು ಅಧಿಕಾರಿಗಳು ಸದಾ ಸಿದ್ಧರಾಗಿದ್ದೇವೆ. ಚೈಲ್ಡ್ ಹೋಂನಲ್ಲಿದ್ದ ಮಕ್ಕಳು ಇಂದು ಉನ್ನತ ಸ್ಥಾನದಲ್ಲಿದ್ದಾರೆಂದರೇ, ಅದಕ್ಕೆ ಅವರಿಗೆ ಸಿಕ್ಕ ಬೆಂಬಲವೇ ಕಾರಣಿಭೂತವಾಗಿದೆ. ಮಕ್ಕಳ ಪಾಲನೆ ಪೋಷಣೆಗೆ ಚೈಲ್ಡ್ ಹೋಂ ಸಿಬ್ಬಂದಿ ಮತ್ತು ಎನ್.ಜಿ.ಓ ಗಳು ಮಾಡುತ್ತಿರುವ ಕಾರ್ಯ ಪ್ರಶಂಸನೀಯ ಎಂದರು. ಚೈಲ್ಡ್ ಹೋಂ ನಲ್ಲಿ ಬೆಳೆದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂದು ತಮ್ಮ ತಿಳಿಸಿದರು.
ಮಹೇಶ್ ಫೌಂಡೇಶನನ ಸಂಸ್ಥಾಪಕ ಮಹೇಶ್ ಜಾಧವ ಅವರು ತಮ್ಮ ಸಹಯೋಗದಲ್ಲಿ ಮೂರು ದಿನ ಕಾರ್ಯಾಗಾರವನ್ನು ಆಯೋಜಿಸಿ, ತಮಗೆ ಅನೇಕ ವಿಷಯಗಳನ್ನು ಅರಿಯಲು ಅನುವು ಮಾಡಿಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮಕ್ಕಳನ್ನು ಪೋಷಿಸುವುದು ದೊಡ್ಡ ಜವಾಬ್ದಾರಿ ಅಲ್ಲದೇ, ಇದೊಂದು ಪುಣ್ಯದ ಕೆಲಸ. ಕಳೆದ 17 ವರ್ಷಗಳಿಂದ ತಾವೂ ಎಚ್.ಐ.ವಿ ಪೀಡಿತ ಮಕ್ಕಳ ಪಾಲನೆಯನ್ನು ಮಾಡುತ್ತಿದ್ದು, ತಮ್ಮ ಕಾರ್ಯಕ್ಕೆ ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಕಾರ್ಯಕ್ರಮದ ವ್ಯವಸ್ಥಾಪಕರಾದ ಸರೀತಾ ಹೆಗಡೆ, ಕಾರ್ಯಕ್ರಮದ ಅಧಿಕಾರಿಗಳಾದ ನಿರ್ಮಲಾ, ಮಕ್ಕಳ ರಕ್ಷಣಾಧಿಕಾರಿಗಳಾದ ಜೆ.ಬಿ. ಲೋಕೇಶ್ ಸೇರಿದಂತೆ ಬೆಳಗಾವಿ, ಕಲ್ಬುರ್ಗಿ ವಿಭಾಗದ ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು ಭಾಗಿಯಾಗಿದ್ಧರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ