ಪ್ರಗತಿ ವಾಹಿನಿ ಸುದ್ದಿ. ಬೀಜಿಂಗ್ : ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗುವತ್ತ ದಾಪುಗಾಲು ಹಾಕುವ ದಿಶೆಯಲ್ಲಿ ಚೀನಾ ರಕ್ಷಣಾ ವ್ಯವಸ್ಥೆಯಲ್ಲಿ ತೀವ್ರತರವಾದ ಬದಲಾವಣೆ ಮಾಡಿಕೊಳ್ಳುತ್ತಾ ಬಂದಿದೆ. ಹಿಂದಿನ ಎರೆಡು ಬಜೆಟ್ ಗಳಲ್ಲಿ ತನ್ನ ಸೇನಾ ವ್ಯವಸ್ಥೆಯನ್ನು ಬಲಗೊಳಿಸುವತ್ತ ಗಮನ ಹರಿಸಿತ್ತು. ಈಗಿನ ಬಜೆಟ್ ನಲ್ಲಿಯೂ ಹಿಂದೆಂದೂ ಮಾಡಿರದಷ್ಟು ವೆಚ್ಚವನ್ನು ಈ ಬಾರಿ ಮಾಡುತ್ತಿರುವುದನ್ನು ನೋಡಿದರೆ, ಬಹುತೇಕ ರಕ್ಷಣಾ ಬಲಕ್ಕೆ ಮೊದಲ ಆದ್ಯತೆ ನೀಡಿದಂತೆ ಕಾಣುತ್ತಿದೆ. ಬಜೆಟ್‌ನ ಮೊತ್ತವನ್ನು ಸತತ ಎಂಟನೇ ವರ್ಷವೂ ಹೆಚ್ಚಿಸಿದೆ. ಮಿಲಿಟರಿಗಾಗಿ 1.55 ಟ್ರಿಲಿಯನ್ ಯುವಾನ್ ಅಂದರೆ ಭಾರತದ ಮೊತ್ತದಲ್ಲಿ ₹18.30 ಲಕ್ಷ ಕೋಟಿಯಷ್ಟು ವ್ಯಯಿಸಲಾಗುತ್ತಿದೆ. ಇದು ಹಿಂದಿನ ಬಜೆಟ್ ಗಿಂತ ಶೇಕಡಾ 7.2 ರಷ್ಟು ಹೆಚ್ಚಾಗಿದೆ.
ತನ್ನನ್ನು ಹಲವು ಬಗೆಯಲ್ಲಿ ಕಟ್ಟಿ ಹಾಕಲು ಯತ್ನಿಸುತ್ತಿರುವ ಅಮೆರಿಕಾಕ್ಕೆ ರಷ್ಯಾದಂತೆಯೇ ಲಂಗು ಲಗಾಮಿಗೆ ಸಿಗದ ರೀತಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ಬೆಳೆದು ಸ್ವತಂತ್ರವಾಗಿ, ಸರಿ ಸಮನಾಗಿ ನಿಲ್ಲುವ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವಲ್ಲಿ ಸಫಲವಾಗುತ್ತಿದೆ. ಅಲ್ಲದೇ ಅಮೆರಿಕಾ ಮತ್ತು ಬ್ರಿಟನ್ ಗಳು ಸೇರಿ, ಜಗತ್ತಿನ ಯಾವ ಮೂಲೆಯನ್ನಾದರೂ ಅಂಕುಶಕ್ಕೆ ಒಳಪಡಿಸಬಹುದು ಎಂಬ ಅಹಮಿಕೆಯನ್ನು ರಷ್ಯಾ ಮುರಿದಂತೆಯೇ, ತಾನೂ ಯಾವುದರಲ್ಲಿಯೂ ಕಡಿಮೆಯಿಲ್ಲವೆಂದು ತೋರಿಸ ಹೊರಟಿದೆ. ರಷ್ಯಾದ ಬಲವನ್ನು ಕುಂಠಿತಗೊಳಿಸಲು ಉಕ್ರೈನ್ ದೇಶವನ್ನು ಬಳಸಿಕೊಳ್ಳುವ ಇಂಗಿತ ಅಮೆರಿಕಾದ್ದಿತ್ತು. ಅಲ್ಲಿ ನ್ಯಾಟೋ ಪಡೆಯನ್ನು ಇರಿಸಲು ಏನೆಲ್ಲಾ ಮಾಡಿತಾದರೂ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ವರ್ಷದ ಕೆಳಗೆ ಭೀಕರ ಕಾಳಗಕ್ಕಿಳಿದರು. ಸಾವಿನ ಪ್ರಮಾಣ, ಎರೆಡನೆಯ ಜಾಗತಿಕ ಯುದ್ಧದಲ್ಲಿ ಜಪಾನ್ ನಲ್ಲಿ ಸಾವನ್ನಪ್ಪಿದ ನಾಗರಿಕರ ಸಂಖ್ಯೆಗೆ ಸಮನಾಗಿದೆ. ಅಪಾರ ಪ್ರಮಾಣದಲ್ಲಿ ಹಣ ಪೋಲಾಗಿಲ್ಲದೇ ನಾಗರಿಕರು, ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅದರ ಮಧ್ಯೆ ರಷ್ಯಾದ ಮೇಲೆ ಉಕ್ರೈನ್ ಅನ್ನು ಎತ್ತಿ ಕಟ್ಟಿದಂತೆ, ಏಷ್ಯಾ ಖಂಡದಲ್ಲಿ ಭಾರತವನ್ನು ತನ್ನ ವಿರುದ್ದ ಎತ್ತಿ ಕಟ್ಟಬಹುದೆಂಬ ಭೀತಿ ಚೀನಾಕ್ಕಿದೆ. ಹಾಗಾಗಿ ಭಾರತದ ಸಾಮರ್ಥ್ಯಕ್ಕಿಂತಲೂ ನಾಲ್ಕು ಪಟ್ಟು ತನ್ನ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಲು ಹವಣಿಸುತ್ತಿದೆ ಎಂಬ ಮಾತಿಗೆ ಈ ಬಾರಿಯ ಬಜೆಟ್ ಪುಷ್ಟಿ ನೀಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ