ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಕೊರೊನಾದಿಂದ ಕೊಂಚ ಚೇತರಿಸಿಕೊಳ್ಳುತ್ತಿರುವ ಚೀನಾದಲ್ಲಿ ಈಗ ಹ್ಯಾಂಟ ವೈರಸ್ ಕಾಣಿಸಿಕೊಂಡಿದೆ.
ಹೌದು. ಚೀನಾದಲ್ಲಿ ಇದೀಗ ಈ ಹ್ಯಾಂಟ ವೈರಸ್ ಗೆ ಯುನ್ನಾನ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಂಡಾಂಗ್ ಪ್ರಾಂತ್ಯಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ವೈರಸ್ 32 ಜನರಲ್ಲಿ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹ್ಯಾಂಟ ವೈರಸ್ ಕೊರೊನಾದಂತೆ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹ್ಯಾಂಟ ವೈರಸ್ ಸೋಂಕು ಮೊದಲಿಗೆ ಇಲಿ ಜಾತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಈ ಪ್ರಾಣಿಗಳ ಮಲ, ಮೂತ್ರ, ಲಾಲಾರಸಗಳನ್ನು ಮನುಷ್ಯರು ಸ್ಪರ್ಷಿಸಿದಾಗ ಈ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆರೋಗ್ಯವಂಥ ಮನುಷ್ಯರಿಗೂ ಈ ವೈರಾಣು ಸೋಂಕು ತಗುಲಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಹ್ಯಾಂಟ ವೈರಸ್ ನಿಂದ ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ಹೊಟ್ಟೆನೋವು, ತಲೆತಿರುಗುವಿಕೆ, ಶೀತ ಮತ್ತು ವಾಕರಿಕೆ, ವಾಂತಿ, ಅತಿಸಾರದಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರದ ದಿನಗಳಲ್ಲಿ ಶ್ವಾಸಕೋಶಗಳಿಗೆ ನೀರು ತುಂಬಿಕೊಳ್ಳುವುದು, ಉಸಿರಾಟಕ್ಕೆ ತೊಂದರೆಯಾಗುವುದರಿಂದ ಅಪಾಯ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ