
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಜೈಲ್ ರಸ್ತೆಯಲ್ಲಿ ನಡೆದಿದೆ.
ಜಗನ್ನಾಥ ರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ಎಷ್ಟೋ ವರ್ಷಗಳ ಹಿಂದೆಯೇ ವಿಷ ಸೇವಿಸಿ ಈ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೃಹತ್ ಮನೆ ಸಂಪೂರ್ಣ ಪಾಳು ಬಿದ್ದಂತಾಗಿದ್ದು, ಅಕ್ಕಪಕ್ಕದಲ್ಲಿಯೂ ಯಾವುದೇ ಮನೆಗಳಿಲ್ಲ. ಹಲವು ವರ್ಷಗಳಿಂದ ಮನೆಗೆ ಹಾಗೂ ಮನೆಯ ಗೇಟ್ ಗೆ ಬೀಗ ಹಾಕಿದಂತೆ ಇದ್ದು, ಪೀಠೋಪಕರಣಗಳು ಕಳ್ಳರು ಕದ್ದೊಯ್ದ ಸ್ಥಿತಿಯಲ್ಲಿದೆ.
ಹಲವು ದಿನಗಳಿಂದ ಈ ಭಾರದಲ್ಲಿ ಓಡಾಡುವಾಗ ಸಾರ್ವಜನಿಕರಿಗೆ ಕೆಟ್ಟ ವಾಸನೆ ಬರುತ್ತಿತ್ತು. ಆದರೂ ಜನರು ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ನಿನ್ನೆ ನಾಯಿಯೊಂದು ತಲೆಬುರುಡೆ, ಎಲುಬುಗಳನ್ನು ಮನೆಯಿಂದ ಹೊರಗೆ ಎಳೆದು ತರುವುದನ್ನು ಗಮನಿಸಿ ಜನರು ಅನುಮಾನಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದರೆ ಬಾಗಿಲ ಬಳಿ ಒಂದು ಅಸ್ಥಿಪಂಜರ, ಮನೆಯ ಹಾಲ್ ನಲ್ಲಿ ಮೂರು ಹಾಗೂ ಮನೆಯ ರೂಮಿನಲ್ಲಿ 2 ಅಸ್ಥಿಪಂಜರಗಳು ಪತ್ತೆಯಾಗಿವೆ. ಕ್ಷಣಕಾಲ ಪೊಲೀಸರೇ ಆಘಾತಗೊಂಡಿದ್ದಾರೆ.
ಮನೆಯಲ್ಲಿ ಪರಿಶೀಲಿಸಿದಾಗ ಡೆತ್ ನೋಟ್ ಒಂದು ಪತ್ತೆಯಾಗಿದೆ. 2019ರಲ್ಲಿಯೇ ,ಮನೆಯವರೆಲ್ಲ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. 2019ರಲ್ಲಿ ಕೊನೆ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. 2850 ರೂ ಕರೆಂಟ್ ಬಿಲ್ ಬಾಕಿ ಇದೆ. ಜಗನ್ನಾಥ ರೆಡ್ಡಿ ನಿವೃತ್ತ ಇಂಜಿನಿಯರ್ ಆಗಿದ್ದರು. ಆದರೆ ಕುಟುಂಬ ಸಮೇತ ಮನೆಯಲ್ಲಿಯೇ ನಿಗೂಢವಾಗಿ ಸಾವಿಗೆ ಶರಣಾಗಿದ್ದು ಮಾತ್ರ ಅಚ್ಚರಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ