Latest

ಇಂಜಿನಿಯರಿಂಗ್ ಮುಗಿಸಿದವರಲ್ಲಿ ಶೇ. ೭ ರಷ್ಟು ಮಾತ್ರ ಉದ್ಯೋಗಕ್ಕೆ ಅರ್ಹರು

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :

ಇಂಜಿನಿಯರಿಂಗ್ ಪದವಿ ಮುಗಿಸಿದವರಲ್ಲಿ ಕೇವಲ ಶೇ. ೭ ರಷ್ಟು ಮಾತ್ರ ಉದ್ಯೋಗಕ್ಕೆ ಅರ್ಹರಿದ್ದಾರೆ. ಭವಿಷ್ಯತ್ತಿನಲ್ಲಿ ಬರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ ಹೊಂದದಿರುವುದು ಇದಕ್ಕೆ ಕಾರಣ ಎಂದು ಸೆಕ್ಯುರಿಟಿ ಕನ್ಸಲ್ಟನ್ಸಿ ಸರ್ವಿಸಿಸ್ ಬೆಂಗಳೂರು ಸಂಸ್ಥಾಪಕರು ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶಶಿಧರ ಸಿ.ಎನ್ ಹೇಳಿದರು.
ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ತಾಂತ್ರಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Home add -Advt

ಮುಂಬರುವ ದಿನಗಳಲ್ಲಿ ಸರಕಾರವು ತನ್ನ ಆಡಳಿತವನ್ನು ಮೊಬೈಲ್ ಆಪ್‌ಗಳ ಮುಖಾಂತರ ನಡೆಸುವ ದಿನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಹೊಸ ಹೊಸ ಮೊಬೈಲ್ ಆಪ್‌ಗಳನ್ನು ಸೃಷ್ಟಿ ಮಾಡುವ ಅಗತ್ಯವಿದೆ ಎಂದರು.
ಇಂದಿನ ತಾಂತ್ರಿಕ ಯುಗದಲ್ಲಿ ಜೀವನ ಪೂರ್ತಿ ಕಲಿಕೆಯಲ್ಲಿ ತೊಡಗಿದವರು ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಮುಂಬೈನ ಮುಖ್ಯ ಅಭಿಯಂತರ ಸುಜಯ ಹಂಜೆ ಮಾತನಾಡಿ, ವಿದ್ಯಾರ್ಥಿಗಳು ದೃಢತೆ ಮತ್ತು ಆತ್ಮ ವಿಶ್ವಾಸದೊಂದಿಗೆ ಅಧ್ಯಯನ ಮಾಡಬೇಕು. ಪ್ರತಿ ನಿಮಿಷಕ್ಕೊಮ್ಮೆ ತಾಂತ್ರಿಕತೆ ಬದಲಾವಣೆಯಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನಾವು ತಾಂತ್ರಿಕ ಜ್ಞಾನ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಮಾತನಾಡಿ, ನಾವು ಮುಂದಿನ ದಿನಮಾನದಲ್ಲಿ ಉನ್ನತ ಸಾಧನೆ ಮಾಡುವ ಗುರಿ ಹೊಂದಿ ಮುನ್ನುಗ್ಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಆದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ತೊರೆದು ಅಧ್ಯಯನ ಮಾಡುವ ಮೂಲಕ ಜೀವನದಲ್ಲಿ ನಿರ್ಧಿಷ್ಟ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇಸ್ಲಾಂಪೂರದ ವಿಕ್ರಮಆದಿತ್ಯ ಘಾಟಗೆ, ವಿಜಯಪುರದ ಅತೀಪ ಹುಸೇನ, ಹುಬ್ಬಳ್ಳಿಯ ಪೂಜಾ ಬಿ., ಮುದೋಳದ ವಿಜಯಕುಮಾರ ಕುಲಕರ್ಣಿ, ಬೆಳಗಾವಿಯ ಸಕಲೀನ ಮೋಮಿನ ಮಾತನಾಡಿದರು. ತಾಂತ್ರಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸ್ಪರ್ಧಾ ವಿಜೇತರಿಗೆ ಸುಮಾರು ೨.೫೦ ಲಕ್ಷ ರೂ.ಗಳಷ್ಟು ನಗದು ಬಹುಮಾನ ನೀಡಿ ಗೌರವಿಸಿದರು.

ಪ್ರೊ. ವಿ.ಕೆ.ಪಾಟೀಲ, ಪ್ರೊ. ಸುನೀಲ ಹೆಬ್ಬಾಳೆ, ಪ್ರೊ. ವಿ.ಎಂ.ಬುದಿಹಾಳ, ಪ್ರೊ. ಸತೀಶ ಭೋಜನ್ನವರ, ಡಾ. ಸುಭಾಷ ಮೇಟಿ, ಡಾ. ಸಿದ್ದೇಶ ಎಂ.ಬಿ., ಪ್ರೊ. ಸಚೀನ ಮೆಕ್ಕಳಕಿ ಮುಂತಾದವರು ಉಪಸ್ಥಿತರಿದ್ದರು.
ಪ್ರೊ.ವಿಜಯ ಹಾಲಪ್ಪನವರ ಸ್ವಾಗತಿಸಿದರು. ಯಾಸ್ಮೀನ ಮಸಳಿ ಮತ್ತು ಅಶ್ವಿನಿ ಕಾಗರ ಪರಿಚಯಿಸಿದರು. ಸಾನಿಯಾ ಕತೀಬ ಮತ್ತು ಅಶ್ವಿನಿ ತಳವಾರ ನಿರೂಪಿಸಿದರು. ಪ್ರೊ. ವಿವೇಕ ಪಾಟೀಲ ವಂದಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಯದವರಿಗೆ ಶೇರ್ ಮಾಡಿ)

Related Articles

Back to top button