Kannada NewsKarnataka News

ಜಲಶಕ್ತಿ ಅಭಿಯಾನದಡಿ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಕೇಂದ್ರ ಸರಕಾರದ ಪ್ರಧಾನಮಂತ್ರಿ ಜಲಶಕ್ತಿ ಅಭಿಯಾನ ಯೋಜನೆಯ ಅಡಿಯಲ್ಲಿ ಬೆಳಗಾವಿಯ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ವಿಜಯ ದಶಮಿಯ ದಿನ ಉದ್ಘಾಟಿಸಿದರು.

ಬೆಳಗಾವಿ ಪೊಲೀಸ್ ಆಯುಕ್ತರ ಕಾರ್ಯಾಲಯದ ಆವರಣದಲ್ಲಿ ನಡೆದ ಸರಣ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಿದ ಶಂಕರಗೌಡ ಪಾಟೀಲ, ಪೊಲೀಸರು ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಎಷ್ಟೋ ಬಾರಿ ಅವರಿಗೆ ಸ್ವಂತ ಆರೋಗ್ಯ ಮತ್ತು ಕುಟುಂಬಗಳ ಕಡೆಗೆ ಲಕ್ಷ್ಯ ವಹಿಸಲು ಸಾಧ್ಯವಾಗುವುದಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಹ ಇರುವುದಿಲ್ಲ ಎಂದು ವಿಷಾಧಿಸಿದರು.

ಹಬ್ಬಗಳ ಸಂದರ್ಭದಲ್ಲಿ ಪೊಲೀಸರು ಕುಟುಂಬದ ಜೊತೆ ಹಬ್ಬ ಆಚರಿಸಲು ಆಗುವುದಿಲ್ಲ. ಜನರ ಸುರಕ್ಷತೆಗಾಗಿ ಹಗಲು, ರಾತ್ರಿ ಕೆಲಸ ಮಾಡುತ್ತಾರೆ. ನಿರಂತರ ಒತ್ತಡದ ಜೀವನ ನಡೆಸಬೇಕಾದ ಸ್ಥಿತಿ ಅವರದ್ದಾಗಿದೆ. ಹಾಗಾಗಿ ಪೊಲೀಸರ ಸಲುವಾಗಿ ಸರಕಾರ ಹಲವುಯಜನೆಗಳನ್ನು ಜಾರಿಗೊಳಿಸಿದೆ. ಅವುಗಳು ಸರಿಯಾಗಿ ಬಳಕೆಯಾಗಬೇಕು ಎಂದು ಶಂಕರಗೌಡ ಪಾಟೀಲ ಹೇಳಿದರು.

ಪಿವಿಜಿ ಫೌಂಡೇಶನ್ ನಿಂದ ಜಾರಿ

ಕೇಂದ್ರ ಸರಕಾರದ ಜಲಶಕ್ತಿ ಅಭಿಯಾನದ ಅಡಿಯಲ್ಲಿ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಬೆಳಗಾವಿಯ ಪಿವಿಜಿ ಫೌಂಡೇಶನ್ ನಿರಂತರವಾಗಿ ನೀರನ್ನು ಸರಬರಾಜು ಮಾಡುವ ಹೊಣೆಯನ್ನು ನಿರ್ವಹಿಸಲಿದೆ. ಪೊಲೀಸರ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಂದಿಸಲಿದೆ ಎಂದು ಅವರು ಭರವಸೆ ನೀಡಿದರು.

ಪೊಲೀಸ್ ಆಯುಕ್ತ ಲೋಕೇಶಕುಮಾರ ಮಾತನಾಡಿ, ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಪಿವಿಜಿ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಘೋಟಗೆ, ಮಾಜಿ ಮೇಯರ್ ವಿಜಯ ಮೋರೆ, ಎಸಿಪಿ ನಾರಾಯಣ ಬರಮನಿ ಮೊದಲಾದವರು ಭಾಗವಹಿಸಿದ್ದರು.

ಯೋಜನೆಯ ಅಡಿಯಲ್ಲಿ ಪಿವಿಜಿ ಫೌಂಡೇಶನ್ ಮುಂದಿನ ಒಂದು ವರ್ಷದವರೆಗೆ ಎಲ್ಲ ಪೊಲೀಸ್ ಠಾಣೆಗಳಿಗೆ ಪ್ರತಿ 2 ದಿನಕ್ಕೊಮ್ಮೆ ನೀರಿನ ಕ್ಯಾನ್ ಗಳನ್ನು ಸರಬರಾಜು ಮಾಡಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button