ಪ್ರಗತಿವಾಹಿನಿ ಸುದ್ದಿ, ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ, ಶನಿವಾರದಂದು ಜರುಗಿದ ಬನದ ಹುಣ್ಣಿಮೆ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು, ಗುಡ್ಡದ ವಿಶಾಲವಾದ ಪ್ರದೇಶದಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ಪದಾರ್ಥಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದಾರೆ.
ದೇವಸ್ಥಾನ ಸಿಬ್ಬಂದಿ ಭಾನುವಾರ ನಸುಕಿನ ಜಾವದಿಂದಲೇ ಅವುಗಳನ್ನು ವಿಲೇವಾರಿಗೊಳಿಸಿ, ಸ್ವಚ್ಛತಾ ಕಾಯಕದಲ್ಲಿ ನಿರತವಾಗಿರುವುದು ಕಂಡುಬಂದಿತು.
ಒಂದೆಡೆ ನೂರಾರು ಕಾರ್ಮಿಕರು ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆ, ಮತ್ತೊಂದೆಡೆ ಸ್ವಚ್ಛತೆಗೆ ಒತ್ತು ನೀಡುವಂತೆ ಅಧಿಕಾರಿಗಳು ಭಕ್ತರಲ್ಲಿ ವಿನಂತಿ ಮಾಡುತ್ತಿದ್ದರು.
ಯಲ್ಲಮ್ಮನಗುಡ್ಡಕ್ಕೆ ಬರುವ ಪ್ರತಿ ಭಕ್ತರು ವಿಶಾಲವಾದ ಪ್ರದೇಶದಲ್ಲಿ ವಾಸ್ತವ್ಯ ಹೂಡುತ್ತಾರೆ. ತಾವು ತಂಗಿದ ಸ್ಥಳದಲ್ಲೇ ಒಲೆ ಹೂಡಿ ನೈವೇದ್ಯ ತಯಾರಿಸಿ ಪರಡಿ ತುಂಬುತ್ತಾರೆ. ಆದರೆ, ಊರಿಗೆ ಮರಳುವ ವೇಳೆ ಭಕ್ತರು ಅಡುಗೆ ಮಾಡಿದ ಸ್ಥಳ ಶುಚಿಗೊಳಿಸಬೇಕು. ಸ್ವಚ್ಛತೆ ಕಾಪಾಡಲು ನಮ್ಮೊಂದಿಗೆ ಸಹಕರಿಸಬೇಕು’ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಕೋರಿದರು.
ಭಾನುವಾರವೂ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು, ಯಲ್ಲಮ್ಮನ ಸಾನ್ನಿಧ್ಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದಲ್ಲಿ ಆದಿಶಕ್ತಿ ಶ್ರೀ ರೇಣುಕೆ ದರ್ಶನಕ್ಕಾಗಿ ಸರತಿ ಸಾಲಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅನ್ನು ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ವಲಯ ಕಚೇರಿ ವತಿಯಿಂದ ದೇವಸ್ಥಾನಕ್ಕೆ ನೀಡಲಾಯಿತು. ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ, ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ ರವಿಪತಿ, ಶಿವಾನಂದ ಬಡಿಗೇರ, ಬಾಬು ಪಾಸಲಕರ, ಸಾಹೇಬಗೌಡ ದೊಮಮನಿ, ಸಂಗನಗೌಡ ತಾಳೇಗೌಡ್ರ, ನಾನಾಗೌಡ ಹಾದಿಮನಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ