Karnataka NewsLatestPolitics

*ಬಟ್ಟೆಯ ಕೈಚೀಲದ ಸ್ವಯಂ ಚಾಲಿತ ಯಂತ್ರಕ್ಕೆ ಚಾಲನೆ*

ಪರಿಸರ ಸ್ನೇಹಿ ಉತ್ಪನ್ನ ಸಂಶೋಧನೆಗೆ ಉತ್ತೇಜನ: ಈಶ್ವರ ಖಂಡ್ರೆ


ಪ್ರಗತಿವಾಹಿನಿ ಸುದ್ದಿ:
ಪರಿಸರ ಮಾಲಿನ್ಯ ತಡೆಗೆ ವಿನೂತನ ಪರಿಹಾರ ಹುಡುಕಲು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಲು ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪರಿಸರ ಇಲಾಖೆಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟಡದಲ್ಲಿ ಅಳವಡಿಸಲಾಗಿರುವ ಸ್ವಯಂ ಚಾಲಿತ ಬಟ್ಟೆಯ ಕೈಚೀಲ ವಿತರಣಾ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಕ ಬಳಕೆ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ತೀವ್ರ ಹಾನಿ ಆಗುತ್ತಿದ್ದು, ಇದಕ್ಕೆ ಪರ್ಯಾಯವಾದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವಂತೆ ತಿಳಿಸಿದರು.


ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ಜಗತ್ತಿಗೇ ಸವಾಲಾಗಿದ್ದು, ಈ ಸಂದರ್ಭದಲ್ಲಿ ಪ್ರಕೃತಿ, ಪರಿಸರ ಸಂರಕ್ಷಣೆಗೆ ಕೈಗೊಳ್ಳುವ ಸಣ್ಣ ಪರಿಹಾರಗಳೂ ದೀರ್ಘ ಕಾಲದಲ್ಲಿ ದೊಡ್ಡ ಪರಿಣಾಮ ಬೀರುತ್ತವೆ ಎಂದರು.


ಮಾಲಿನ್ಯ ನಿಯಂತ್ರಣಕ್ಕೆ ಸಾಂಪ್ರಧಾಯಿಕ ವಿಧಾನಗಳ ಜೊತೆಗೆ ನಾವೀನ್ಯಪೂರ್ಣ ಮತ್ತು ಆಧುನಿಕ ತಂತ್ರಜ್ಞಾನ ಆಧಾರಿತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಂಶೋಧನೆಗೂ ಉತ್ತೇಜನ ನೀಡಬೇಕು ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.


ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಾಟಲಿ, ಚಮಚ, ತಟ್ಟೆ, ಲೋಟ ಇವೆಲ್ಲವೂ ಪರಿಸರಕ್ಕೆ ಶತ್ರುಗಳಾಗಿದ್ದು ಇದಕ್ಕೆ ಪರ್ಯಾಯವಾಗಿ ಜೈವಿಕ ವಿಘಟನೀಯ ವಸ್ತುಗಳ ಬಳಕೆಗೆ ಶೀಘ್ರ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಜೈವಿಕವಾಗಿ ವಿಘಟನೆಯಾಗುವ ಸಸ್ಯ ಜನ್ಯ ಪಾಲಿ ಲಿಕ್ವಿಡ್ ಆಸಿಡ್ ಪೋಲಿಮರ್ ಕೈಚೀಲ (ಕ್ಯಾರಿ ಬ್ಯಾಗ್)ಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ಅವಕಾಶ ಆಗುವಂತೆ ನಗರಾಭಿವೃದ್ಧಿ ಇಲಾಖೆಗೆ ಕಳಿಸಿರುವ ಪ್ರಸ್ತಾವನೆಯ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಶರಣು ಮೋದಿ, ಮರಿಸ್ವಾಮಿ ಗೌಡ ಮತ್ತು ಡಾ. ಪ್ರದೀಪ್, ಮಂಡಳಿಯ ಅಧ್ಯಕ್ಷ (ಉಸ್ತುವಾರಿ) ವಿಜಯ ಮೋಹನ ರಾಜ್, ಸದಸ್ಯ ಕಾರ್ಯದರ್ಶಿ ಬಾಲಚಂದ್ರ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button