ನಾಳೆ ಸಿಎಂ ವೈಮಾನಿಕ ಸಮೀಕ್ಷೆ: ಎಲ್ಲಿ ಲ್ಯಾಂಡ್ ಆಗಲಿದ್ದಾರೆ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ ಬೆಳಗಾವಿ –
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಳೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಖುದ್ದು ಅವಲೋಕನ ಮಾಡಲಿದ್ದಾರೆ.
ನೆರೆಯಿಂದ ತೊಂದರೆಯಾದ ಸಂತ್ರಸ್ತರಿಗೆ ಸಾಂತ್ವನ ಹೇಳುವ ಜತೆಗೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸುವ ಬಗ್ಗೆ ಮಾಹಿತಿ ಬಂದಿದೆ. ಆದರೆ ಅವರು ಪ್ರವಾಸ ಪಟ್ಟಿ ಇನ್ನೂ ಬಂದಿಲ್ಲ. ಎಲ್ಲಿ ಲ್ಯಾಂಡ್ ಆಗಲಿದ್ದಾರೆ, ಎಲ್ಲಿ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಟಿಪಿ ಬಂದ ನಂತರವೇ ಗೊತ್ತಾಗಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ (ಪ್ರಗತಿವಾಹಿನಿ) – ಭಾನುವಾರವೂ ಬಿಡುವಿಲ್ಲದೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಡಿಯೋ ಸಂವಾದ ನಡೆಸಿದರು. ಅದರ ಮುಖ್ಯಾಂಶಗಳು ಹೀಗಿವೆ:
1. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಪ್ರವಾಹ ಉಂಟಾಗಿ ಜನ ತೊಂದರೆಗೆ ಒಳಗಾಗಿದ್ದಾರೆ.
2. ರಾಜ್ಯ ಸರ್ಕಾರ ಇದನ್ನು ಗಮನಿಸಿದ್ದು, ಯುದ್ಧದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ರೂಪಿಸಲು ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
3. ಸದ್ಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಪ್ರವಾಹ ಉಂಟಾಗಿದೆ.
4. ಇದರಿಂದ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಕೃಷಿ ಬೆಳೆ ಜೊತೆಗೆ ಆಸ್ತಿ ಪಾಸ್ತಿ ಮತ್ತು ಮನೆಗಳಿಗೆ ಹಾನಿಯಾಗಿದ್ದು, ಜನ ಮತ್ತು ಜಾನುವಾರುಗಳು ತೊಂದರೆಗೆ ಸಿಲುಕಿವೆ.
5. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯಕ್ ಎಂಬ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆ ಜರುಗಿದೆ. ಅಲ್ಲದೆ ಹಲವಾರು ಬ್ರಿಡ್ಜ್ ಕಂ ಬ್ಯಾರೇಜುಗಳು ಮುಳುಗಿವೆ.
6. ಜಿಲ್ಲಾಡಳಿತವು ತುರ್ತು ಪರಿಹಾರ ಕಾರ್ಯ ಕೈಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಲ್ಲದೆ ಪುನರ್ವಸತಿ ಕೆಲಸಗಳನ್ನು ಯುದ್ಧದೋಪಾದಿಯಲ್ಲಿ ಮಾಡಬೇಕಾಗಿದೆ.
7. ಈಗಾಗಲೇ ಕೆಲವು ಕಡೆ ಪರಿಹಾರ ಕ್ರಮಗಳನ್ನು ಜರುಗಿಸಿದ್ದು, ಅವುಗಳನ್ನು ತೀವ್ರಗೊಳಿಸುವ ಅಗತ್ಯವಿದೆ.
8. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಅಲ್ಲಿ ಸಿಲುಕಿಕೊಂಡಿರುವ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಬೇಕು.
9. ತಕ್ಷಣದ ಕ್ರಮವಾಗಿ ಜಿಲ್ಲಾಧಿಕಾರಿಗಳು ಆಹಾರ, ವಸ್ತ್ರಗಳು, ಹೊದಿಕೆ ಇತ್ಯಾದಿ ಸೌಕರ್ಯಗಳನ್ನು ನಿರಾಶ್ರಿತರಿಗೆ ಒದಗಿಸುವುದಲ್ಲದೆ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು.
10. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ, ಮತ್ತಿತರ ಪಡೆಗಳ ಸಹಾಯ ಪಡೆದುಕೊಂಡು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು ಸೂಚಿಸಲಾಯಿತು.
11. ಈಗಾಗಲೇ ಪ್ರವಾಹ ಪೀಡಿತವಾಗಿರುವ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳುವ ಮಾಹಿತಿ ಇದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಪೇಕ್ಷಣೀಯ.
12. ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಡಳಿತ ಪ್ರವಾಹಕ್ಕೆ ಸಿಲುಕಿದ ಸ್ಥಳಗಳಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿರುವುದು ಮೆಚ್ಚತಕ್ಕದ್ದು. ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವತ್ತ ಕೂಡ ಗಮನ ಹರಿಸುವಂತೆ ಸೂಚಿಸಲಾಯಿತು.
13. ಎನ್ಡಿಆರ್ಎಫ್ ನಿಂದ 3 ತಂಡಗಳು ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸದ್ಯ ಕಾರ್ಯೋನ್ಮುಖವಾಗಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಳ್ಳಿ. ಸೇನೆ ಹಾಗೂ ಎಸ್ಡಿಆರ್ಎಫ್ ಸೇವೆಯನ್ನು ಕೂಡ ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಯಿತು.
14. ಅಗ್ನಿಶಾಮಕ ದಳ, ಪೊಲೀಸ್, ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಅಹೋರಾತ್ರಿ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.
15. ಪುನರ್ವಸತಿ ಕೇಂದ್ರಗಳಲ್ಲಿ ಉತ್ತಮ ಆಹಾರ, ಶುದ್ಧ ಕುಡಿಯುವ ನೀರು, ಹಾಲು ಮತ್ತಿತರ ತುರ್ತು ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕು.
16. ಮಹಾರಾಷ್ಟ್ರದ ಹಲವು ಅಣೆಕಟ್ಟುಗಳಿಂದ ದಿಢೀರ್ ನೀರು ಬಿಡುಗಡೆಯಿಂದಾಗಿ ರಾಜ್ಯದ ಕೆಳಮಟ್ಟದಲ್ಲಿರುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಅಪಾರ ಹಾನಿಯಾಗಿದೆ.
17. ನಮ್ಮ ರಾಜ್ಯದ ವ್ಯಾಪ್ತಿಯ ಅಂದರೆ ಕೃಷ್ಣಾ ನದಿ ತೀರದ ಗ್ರಾಮಗಳು ಹಾಗೂ ಕೃಷಿ ಜಮೀನುಗಳು ಮುಳುಗಡೆ ಆಗಿವೆ. ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವುದು ಅಗತ್ಯ.
18. ನದೀತೀರದ ಗ್ರಾಮಗಳಲ್ಲಿ ನೀರು ಬಿಡುಗಡೆ ಮಾಡುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಿ.
19. ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಡನೆ ಸಂಪರ್ಕ ಸಾಧಿಸಿ, ಅಣೆಕಟ್ಟುಗಳಿಂದ ನೀರು ಹರಿಸುವ ಮುನ್ನ ಮಾಹಿತಿ ನೀಡುವಂತೆ ಹಾಗೂ ನದೀ ತೀರದ ಜನರನ್ನು ಎಚ್ಚರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
20. ಸಂಕಷ್ಟಕ್ಕೊಳಗಾದ ಜನ ಹಾಗೂ ಜಾನುವಾರುಗಳ ರಕ್ಷಣೆ ಸರ್ಕಾರದ ಅತಿ ಆದ್ಯತೆಯ ಕ್ರಮವಾಗಿದೆ. ಜೊತೆಗೆ ಪುನರ್ವಸತಿ ಕಾರ್ಯಗಳನ್ನು ಕೂಡ ಹೆಚ್ಚಿನ ನಿಗಾದೊಂದಿಗೆ ನಿರ್ವಹಿಸಬೇಕು.
21. ನಾಳೆ ಮುಖ್ಯಮಂತ್ರಿಗಳು ಈ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
22. ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ.
ಇದನ್ನೂ ಓದಿ (ಪ್ರಗತಿವಾಹಿನಿ) –https://pragati.taskdun.com/karnataka-news/2-major-decisions-of-yedyurappa-cabinet/
ಹಣಕಾಸಿನ ಲಭ್ಯತೆ
• ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 11.42 ಕೋಟಿ ರೂ. , ವಿಜಯಪುರ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 9.10 ಕೋಟಿ ರೂ. , ಬಾಗಲಕೋಟೆ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 10.55 ಕೋಟಿ ರೂ. , ರಾಯಚೂರು ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 13.02 ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 10.29 ಕೋಟಿ ರೂ. ಅನುದಾನ ಲಭ್ಯವಿದೆ.
ಇದನ್ನೂ ಓದಿ (ಪ್ರಗತಿವಾಹಿನಿ) – ರಾಜಕೀಯಕ್ಕೆ ಗುಡ್ ಬೈ ಹೇಳಿದ ಕುಮಾರಸ್ವಾಮಿ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ