ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್ಥಿಕ ಸಂಕಷ್ಟ, ಕೇಂದ್ರದ ಅನುದಾನ ಕೊರತೆ ನಡುವೆಯೂ ಸಮತೋಲಿತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದೇ ಮೊದಲಬಾರಿಗೆ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ ಗಮನ ಸೆಳೆದಿದ್ದಾರೆ.
7ನೇ ಬಾರಿಗೆ ಬಜೆಟ್ ಮಂದನೆ ಮಾಡಿರುವ ಸಿಎಂ ಯಡಿಯೂರಪ್ಪ, ಸುಮಾರು 2,37,893 ಗಾತ್ರದ ಆಯವ್ಯಯ ಪ್ರಸ್ತುತಪಡಿಸಿದರು. ನಿರೀಕ್ಷೆಯಂತೆ ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ರೈತರು, ಕಾರ್ಮಿಕರು, ಮಹಿಳೆಯರು, ವೃದ್ಧರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ವಿದ್ಯಾರ್ಥಿಗಳಿಗಾಗಿ ಭರಪೂರ ಘೋಷಣೆಗಳನ್ನು ಪ್ರಕಟಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದು, ಹಲವಾರು ಹಳೆಯ ಯೋಜನೆಗಳನ್ನು ಮುಂದುವರೆಸಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿಯೂ ಮುಂದುವರೆಯಲಿದೆ. ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ 1500 ಕೋಟಿ ಅನುದಾನ ಪ್ರಕಟಿಸಿದ್ದಾರೆ. ಇದೇ ರೀತಿ ಉತ್ತರ ಕರ್ನಾಟಕದ ಮಹದಾಯಿ ನದಿನೀರು ಅನುಷ್ಠಾನಕ್ಕೆ 500 ಕೋಟಿ ಒದಗಿಸಲಾಗಿದ್ದು, ಜಲಕ್ಷಾಮ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಟಲ್ ಭೂ ಜಲ ಯೋಜನೆಯಡಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನ 1202 ಕೋಟಿ ಅನುದಾನ ನೀಡಲಾಗಿದೆ.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆ ಮುಂದುವರಿಕೆ 3060 ಕೋಟಿ ರೂ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ, ಹೊಸದಾಗಿ ರಚಿಸಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಚಟುವಟಿಕೆಗಳಿಗೆ ಮುಂದಿನ ವರ್ಷಗಳಲ್ಲಿ 500 ಕೋಟಿ ರೂ. ಪ್ರಕಟಿಸಲಾಗಿದೆ.
ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಘೋಷಿಸಲಾಗಿದ್ದು, ಇದಕ್ಕಾಗಿ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದಲ್ಲಿ 787 ಎಕರೆ ಕಂದಾಯ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ 155 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿರುವ ಅಡಕೆ ಬೆಳೆಗಾರರಿಗೂ ಕೊಡುಗೆ ನೀಡಿದ್ದು, ಬೆಳೆಗಾರರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಪಡೆಯುವ 2 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.5 ಬಡ್ಡಿ ವಿನಾಯಿತಿ ಪ್ರಕಟಿಸಲಾಗಿದೆ. ಬುಡಕಟ್ಟು ವೈದ್ಯ ಪದ್ಧತಿಗೆ ನೆರವಾಗಲು ಶಿವಮೊಗ್ಗದಲ್ಲಿ ಔಷಧ ತಯಾರಿಕಾ ಘಟಕ ಸ್ಥಾಪನೆ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಮತ್ತು ರಾಜ್ಯದ ಸಂಪನ್ಮೂಲ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಮನೆ ಮನೆಗೆ ಗಂಗೆ ನೂತನ ಯೋಜನೆಯನ್ನು ಪ್ರಕಟಸಲಾಗಿದೆ. ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳ ಒಳಚರಂಡಿ ವ್ಯವಸ್ಥೆ ಹಾಗೂ ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಕೆಗೆ ಕ್ರಮ, 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶದ ಮರುಬಳಕೆಗೆ 20 ಕೋಟಿ ರೂ. ವೆಚ್ಚದ ಯೋಜನೆಯನ್ನು ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿಗೆ ಕ್ರಮಕೈಗೊಳ್ಳಲಾಗಿದೆ.
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರತಿಭಾ ಶೋಧನೆ ಕಾರ್ಯಕ್ರಮ ಪ್ರಾರಂಭ. ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಕ್ಷಣ, ಒಂದು ಸಾವಿರ ರೂ. ಮಾಸಿಕ ಶಿಷ್ಯವೇತನ, ಭಾರಿ ಮಳೆಯಿಂದಾಗಿ ಹಾನಿಯಾಗಿರುವ ಶಾಲೆಗಳ ಪುನರ್ ನಿರ್ಮಾಣಕ್ಕೆ 758 ಕೋಟಿ ರೂ. ಅನುದಾನ, 26 ಜಿಲ್ಲೆಗಳ 6469 ಶಾಲಾ ಕೊಠಡಿಗಳನ್ನು ನಬಾರ್ಡ್ ಸಹಯೋಗದೊಂದಿಗೆ ಕಾಮಗಾರಿ ಕೈಗೊಳ್ಳಲು ನಿರ್ಧಾರ.
ಇದೇ ಮೊದಲ ಬಾರಿಗೆ ಮಕ್ಕಳಿಗಾಗಿ ವಿಶೇಷವಾಗಿ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ 36,340 ಕೋಟಿ ಮೀಸಲಿದಲಾಗಿದೆ.
ಪ್ರತೀ ತಿಂಗಳ ಎರಡು ಶನಿವಾರ ಬ್ಯಾಗ್ ರಹಿತ ಸಂಭ್ರಮ ಶನಿವಾರವಾಗಿ ಘೋಷಣೆ,,ಸಂಭ್ರಮದ ಶನಿವಾರ ಮಕ್ಕಳಿಗೆ ಕೇವಲ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ, ಅವರಿಗೆ ಕಲಿಕೆ ಮೇಲೆ ಆಸಕ್ತಿ ಮೂಡಿಸಲು ಚಿಂತನೆ. 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು, ಕಲಿಕೆಗೆ ಸಹಾಯವಾಗಲು ಶಿಕ್ಷಕರಿಗೆ ಎಲ್ಲಾ ಸೇವಾ ಸೌಲಭ್ಯಗಲನ್ನು ಅಂತರ್ಜಾಲದ ಮೂಲಕ ಒದಗಿಸಲು ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ ಪಡಿಸಲು ಕ್ರಮ
ಬಾಲಮಂದಿರಗಳಿಗೆ ರೂ.7 ಕೋಟಿ, 7 ಹೊಸ ಬಾಲಮಂದಿರಗಳ ಸ್ಥಾಪನೆ, ನೆರೆ ಪ್ರದೇಶದ ಅಂಗನವಾಡಿಗಳ ಮರು ನಿರ್ಮಾಣ, 500 ಅಂಧ ವಿದ್ಯಾರ್ಥಿಗಳಿಗೆ ವಿಶೇಷ ಕಿಟ್, ಅಂಥ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, 5 ಜಿಲ್ಲಗಳಲ್ಲಿ ತಾರಾಯಗಳ ಸ್ಥಾಪನೆ, ವಿಜ್ಞಾನ ಪ್ರತಿಭಾ ಶೋಧನೆ, 500 ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ಇದಕ್ಕಾಗಿ ಮಾಸಿಕ ರೂ.1 ಸಾವಿರ ಶಿಷ್ಯ ವೇತನ ನೀಡಲು ನಿರ್ಧಾರಿಸಿರುವುದಾಗಿ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ