ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ನನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಿ, ಮನೆಯಲ್ಲೇ ಇದ್ದರೆ ಲಾಕ್ ಡೌನ್ ಬೇಗನೆ ಮುಗಿಯುತ್ತೆ. ಇಲ್ಲವಾದಲ್ಲಿ ಮುಂದುವರೆಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಅವದಿ ಮುಂದುವರೆಯುವುದಿಲ್ಲ. ಅದೂ ನಾವು ಅದನ್ನು ಹೇಗೆ ಕಟ್ಟುನಿಟ್ಟಿನ ಪಾಲನೆ ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಾಡಿನ ಜನತೆ ಲಾಕ್‍ಡೌನ್ ಅನ್ನು ನಮ್ಮೆಲ್ಲರ ಒಳಿತಿಗಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿರುತ್ತದೆ ಎಂದರು.
ಕೊರೊನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದ ಒಂದು ವಿಪತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅನಿವಾರ್ಯವಾಗಿ 21 ದಿನಗಳ ಕಾಲ ಲಾಕ್‍ಡೌನ್ ವಿಧಿಸಿದ್ದಾರೆ. ಒರ್ವ ಪ್ರಧಾನಮಂತ್ರಿ ದೇಶದ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈಗ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ನಾವು ಎದುರಿಸಲೇಬೇಕಾಗಿದೆ ಎಂದು ಹೇಳಿದರು.
ನಗರ ಪ್ರದೇಶಗಳಲ್ಲಿನ ಜನತೆ ಕರ್ಫ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಜನರು ಲಾಕ್‍ಡೌನ್ ನಿಯಮ ಗಂಭೀರವಾಗಿ ಪರಿಗಣಿಸಿ ಮನೆಯಿಂದ ಹೊರಬರದಂತೆ ನೋಡಿಕೊಳ್ಳಿ ಎಂಬುದು ನನ್ನ ಕಳಕಳಿ ವಿನಂತಿ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ