ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಏ.20ರಿಂದ ಕಟ್ಟುನಿಟ್ಟಿನ ಲಾಕ್ ಡೌನ್ ನಲ್ಲಿ ಕೊಂಚ ವಿನಾಯ್ತಿ ನೀಡಲಾಗಿದ್ದು, ರಾಜ್ಯದಲ್ಲಿ ದ್ವಿಚಕ್ರವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ ಅಂತರ್ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಲಾಕ್ ಡೌನ್ ಹಿನ್ನಲೆಯಲ್ಲಿ ಏಪ್ರಿಲ್ 20 ರಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದ್ದು, ರಾಜ್ಯದಲ್ಲಿ ಮೇ 3ರವರೆಗೂ ನಿಷೇಧಾಜ್ನೆ ಜಾರಿಯಿರುತ್ತದೆ. ಯಾವುದೇ ಹೊಸ ಪಾಸ್ ವಿತರಣೆ ಇರುವುದಿಲ್ಲ. ಏ.20 ರಿಂದ ಪಾಸ್ ಗಳಿಲ್ಲದೇ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಓಡಾಡಬಹುದಾಗಿದೆ. ಆದರೆ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿದ ವಲಯಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮಾತ್ರ ಬೈಕ್ ಓಡಾಟಕ್ಕೆ ಆವಕಾಶ ನೀಡಲಾಗುತ್ತಿದೆ ಎಂದರು.
ಐಟಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಶೇ.33ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗುವುದು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ಅನುಮತಿ ನೀಡಲಾಗುತ್ತಿದ್ದು, ಜೆಲ್ಲಿ ಕಲ್ಲು, ಸರಕು ಸಾಗಣೆ ಸಾರಿಗೆಗಳಿಗೆ ಅನುಮತಿ ನೀಡಲಾಗುವುದು. ಅಗತ್ಯ ವಸ್ತುಗಳ ರವಾನೆಗೆ ಯಾವುದೇ ನಿಬಂದನೆ ಇರುವುದಿಲ್ಲ ಎಂದು ತಿಳಿಸಿದರು.
ಇನ್ನು ಕಂಟೇನ್ಮೆಂಟ್ ಝೋನ್ ಗಳಲ್ಲಿ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಹಿರಿಯ ನಾಗರಿಕರು ಯಾರೂ ಹೊರಗೆ ಬರುವಂತಿಲ್ಲ. ಕಂಟೇನ್ಮೆಂಟ್ ಝೋನ್ ಗಳಿಗೆ ನಾವೇ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ