Latest

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಯನ್ನು ಸಾಕಾರಗೊಳಿಸಿರುವ ಬಜೆಟ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಯಂತೆ ರಾಜ್ಯ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದೇ ನೀತಿಯ ಆಧಾರದ ಮೇಲೆ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಕೃತಜ್ಞತೆ ಅರ್ಪಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಕ್ತಿ ಇಲ್ಲದವನಿಗೆ ಶಕ್ತಿ, ಆರ್ಥಿಕವಾಗಿ ಹಿಂದುಳಿದವರಲ್ಲಿ ಸಾಮರ್ಥ್ಯ ತುಂಬುವುದೇ ಸಾಮರ್ಥ್ಯ. ಸೂರಿಲ್ಲದವರಿಗೆ ಸೂರು, ಉದ್ಯೋಗವಿಲ್ಲದವರಿಗೆ ಉದ್ಯೋಗ, ವಿದ್ಯೆಯಿಲ್ಲದವರಿಗೆ ವಿದ್ಯೆ ಕೊಡುವಂತಹ ಕೆಲಸ ಮಾಡುವುದೇ ನಿಜವಾದ ಆಡಳಿತಗಾರನ ಸಾಮರ್ಥ್ಯ. ಅದೇ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ . ಪ್ರಧಾನ ಮಂತ್ರಿಗಳ ವಿಕಾಸ್, ಸಬ್ ಕಾ ವಿಶ್ವಾಸ್, ಸಬಾ ಕಾ ಪ್ರಯಾಸ್ ತತ್ವದಡಿ ಕೆಲಸ ಮಾಡಲಾಗುತ್ತಿದೆ. ಅಸಮತೋಲನವಿರುವ ಸಮಾಜದಲ್ಲಿ ಕ್ಷೋಭೆ ಉಂಟಾಗಿ, ಪ್ರಗತಿ ಸಾಧ್ಯವಾಗುವುದಿಲ್ಲ. ಮಾತಿನಲ್ಲಿ ಅಲ್ಲ ಕೃತಿಯಲ್ಲಿ ನಮ್ಮನ್ನು ಅಳಿಯಿರಿ. ಸರ್ಕಾರ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡನ್ನು ಮುಂದಿಟ್ಟು ಸಕಾರಾತ್ಮಕ ಚಿಂತನೆಯೊಂದಿಗೆ ಜನರ ಮುಂದೆ ಬರಲಾಗುವುದು. ಇನ್ನೊಬ್ಬರನ್ನು ಹೀಗಳೆದು ನಕಾರಾತ್ಮಕತೆಯೊಂದಿಗೆ ವೋಟು ಕೇಳುವ ಕೆಲಸವನ್ನು ಮಾಡುವುದಿಲ್ಲ. ಸರ್ಕಾರ ಮಾಡಿರುವ ಕೆಲಸಗಳ ಸಾಮರ್ಥ್ಯಗಳ ಮೇಲೆ ಜನರಿಂದ ವೋಟು ಕೇಳುತ್ತೇವೆ ಎಂದು ತಿಳಿಸಿದರು.

ರಾಜ್ಯದ ಆರ್ಥಿಕತೆಯ ಹೆಚ್ಚಳ :
ರಾಜ್ಯದ ಜನರು ಕೆಲವರಿಗೆ ತಮ್ಮ ಸ್ಥಾನವನ್ನು ತೋರಿಸಿದ್ದರೂ,ತಾವೇ ಸಮರ್ಥರು ಎನ್ನುವ ಭ್ರಮೆಯಲ್ಲಿ ಬಹಳಷ್ಟು ಜನ ಇನ್ನೂ ಇದ್ದಾರೆ. ರಾಜ್ಯವನ್ನು, ದೀನದಲಿತರನ್ನು, ಬಡಜನರನ್ನು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವಂತೆ ಮಾಡಲಾಗುತ್ತಿರುವುದು ನಮ್ಮ ಸಾಮರ್ಥ್ಯ. ನಾಡಿನ ಬೊಕ್ಕಸದಿಂದ ಹಣದ ಸೋರಿಕೆಯನ್ನು ತಡೆದು ಆರ್ಥಿಕತೆಯನ್ನು 15000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ರೈತರ ಮಕ್ಕಳಿಗೆ ವಿದ್ಯಾನಿಧಿ ಯಾವುದೇ ಸರ್ಕಾರವೂ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಹೆಣ್ಣುಮಕ್ಕಳಿಗೆ, ರೈತ ಮಕ್ಕಳಿಗೆ ರೈತ ವಿದ್ಯಾನಿಧಿ. ಅಂಗವಿಕಲರ, ವಿಧವೆಯವರ ಮಾಸಾಶನ ಹೆಚ್ಚಳ, ಎಸ್ ಸಿ ಎಸ್ ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ , ಮನೆಗಳ ನಿರ್ಮಾಣಕ್ಕೆ 1.75 ಲಕ್ಷ ದಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ, ಜಮೀನು ಪಡೆಯಲು 20 ಲಕ್ಷ ರೂ. ಸಹಾಯಧನ, ಪ್ರತಿ ತಾಲ್ಲೂಕಿನಲ್ಲಿ 100 ಉದ್ಯೋಗ ಸೃಷ್ಟಿಗೆ, ಹಾಲು ಉತ್ಪಾದಕರಿಗೆ ಕ್ಷೀರ ಬ್ಯಾಂಕ್, 4 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ 1.50 ಲಕ್ಷ ಸಾಲ ಸೌಲಭ್ಯವನ್ನು ನೀಡಲು ಆ್ಯಂಕರ್ ಬ್ಯಾಂಕ್ ಜೋಡಣೆ ಮೂಲಕ 8 -10 ಲಕ್ಷ ಮಹಿಳೆಯರ ಆರ್ಥಿಕ ಸಬಲೀಕರಣ, ಯುವಕರಿಗೆ ಉದ್ಯೋಗ,. ಇದು ಸಾಮರ್ಥ್ಯ ಎಂದರು.

ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿ:
ಶಿಕ್ಷಣ, ಆರೋಗ್ಯ, ದೀನದಲಿತರ ಕಲ್ಯಾಣ ವಿಶೇಷ ಕಾರ್ಯಕ್ರಮಗಳು, ಎಸ್ ಸಿ ಎಸ್ ಪಿ, ಟಿಎಸ್ ಪಿ ಕಾರ್ಯಕ್ರಮಗಳಿಗೆ 28 ಸಾವಿರ ಕೋಟಿ ರೂ. ಇಡಲಾಗಿದೆ. ಬಜೆಟ್ ನಂತರ ಶೇ.90 ರಷ್ಟು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಆದೇಶವನ್ನು ಮಾಡಲಾಗಿದೆ. ಹಿಂದುಳಿದ ವರ್ಗ, ಎಸ್ ಸಿ ಎಸ್ ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶೈಕ್ಷಣಿಕ ಕೇಂದ್ರಗಳಾದ ಧಾರವಾಡ, ಗುಲ್ಬಗಾ , ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ 1000 ಕೊಠಡಿಗಳ ವಿದ್ಯಾರ್ಥಿ ಸಮುಚ್ಛಗಳನ್ನು ನಿರ್ಮಿಸಲಾಗುವುದು. ಜನಾಂಗದ ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಅಮೂಲಾಗ್ರ ಬದಲಾವಣೆ, ಶಿಕ್ಷಣ, ಉದ್ಯೋಗ, ಸಬಲೀಕರಣ ಸಾಧಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳ ಸರ್ವತೋಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನರ ಆಶೀರ್ವಾದ ಬೇಕು ಎಂದು ತಿಳಿಸಿದರು.

ಸಾಮಾಜಿಕ ನ್ಯಾಯ ಕೇವಲ ಭಾಷಣದ ಸರಕಾಗಬಾರದು:
ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ತಕ್ಕಡಿ ಸಮಾನವಾಗಿರಬೇಕು. ಆಗ ಮಾತ್ರ ಸಮಾನತೆ ಸಾಧ್ಯವಿದೆ. ಸಾಮಾಜಿಕ ನ್ಯಾಯ ಭಾಷಣದ ವಸ್ತುವಾಗಿದೆ. ಇರುವರೆಗೂ ಏನು ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ? ಯಾರಿಗೆ ನ್ಯಾಯ ಕೊಟ್ಟಿದ್ದೀರಿ. ಒಂದು ವರ್ಗಕ್ಕಾದರೂ ಕೊಟ್ಟಿದ್ದೀರಾ? ಕೇವಲ ಭಾಷಣದ ಸರಕಾಗಿದೆ. ಮೂಲಭೂತವಾಗಿ ಬೇಕಾಗಿರುವುದನ್ನು ಒದಗಿಸಿದರೆ ಅವರೇ ನ್ಯಾಯವನ್ನು ಪಡೆದುಕೊಳ್ಳುತ್ತಾರೆ ಎಂದರು.

ಅರ್ಹತೆ ಇರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ದುರ್ಬಲ ವರ್ಗದ ಜನರಿಗೆ ಶಕ್ತಿಯ ಜೊತೆ ಸಂಸ್ಕಾರದ ಅಗತ್ಯ ವಿದೆ. ಅದನ್ನು ಕೊಡಲು ಮಠಗಳು ಸಿದ್ಧವಾಗಿವೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ, ವಿದ್ಯೆ ಸಿಗಲಿ ಎನ್ನುವ ಮಹದಾಸೆಯಿಂದ ಈ ಕೆಲಸವನ್ನು ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿರುವ ಮಠಗಳಿಗೆ ಸರ್ಕಾರದ ಸಹಕಾರವಿರುತ್ತದೆ. ಅರ್ಹತೆ ಇರುವವರಿಗೆ, ಮುಂದು ಬರಬೇಕೆನ್ನುವ ಹಂಬಲವಿರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ಎಲ್ಲಾ ವರ್ಗದ ಜನರನ್ನು ಸರಿ ಸಮಾನವಾಗಿ ನೋಡಿಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದರು.

ಗುರು ಮತ್ತು ಭಕ್ತನ ಸಂಬಂಧ
ಕಾಗಿನೆಲೆಯ ಶ್ರೀ ಗಳು ಸದಾ ಮಾರ್ಗದರ್ಶನ ಮಾಡಿದ್ದಾರೆ. ಶಕ್ತಿ ತುಂಬಿದ್ದಾರೆ. ಗುರು ಮತ್ತು ಭಕ್ತನ ಸಂಬಂಧವಿದು. ಕರಾರುರಹಿತ ಪ್ರೀತಿಯ ಸಂಬಂಧವಿದೆ. ಅಧಿಕಾರ ವಿರಲಿ, ಇಲ್ಲದಿರಲಿ ಇದೆ ವಿಶ್ವಾಸ ನಮ್ಮ ಮೇಲೆ ಇದೆ. ಸಾಮಾಜಿಕ, ಶೈಕ್ಷಣಿಕ , ಧಾರ್ಮಿಕ ವಾಗಿ ಅಗತ್ಯವಿರುವುದನ್ನು ಮಾಡುವುದಾಗಿ ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button