ಪ್ರಗತಿವಾಹಿನಿ ಸುದ್ದಿ; ಹಾವೇರಿ : ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲ್ಯಾಣ ಗ್ರಾಮದ ಜಿಟಿಟಿಸಿ ನಿವೇಶನದ ಬಳಿ ಆಯೋಜಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಕಲ್ಯಾಣ ಗ್ರಾಮದಲ್ಲಿ ನೂತನ ತರಬೇತಿ ಸಂಕೀರ್ಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಮಾಹಿತಿ ಪ್ರಾವಿಡೆಂಟ್ ಫಂಡ್ ಮತ್ತು ಇ. ಎಸ್.ಐ ನಲ್ಲಿ ದಾಖಲಾಗಿರುವ 18 ರಿಂದ 25 ವರ್ಷಗಳೊಳಗಿನವರು ದಾಖಲಿಸಿಕೊಂಡಿರುವುದನ್ನು ಆಧರಿಸಿ, ಅಧ್ಯಯನ ಮಾಡಿ ಮಾಹಿತಿ ನೀಡಲಾಗಿದೆ ಎಂದರು.
ಅನುತ್ತೀರ್ಣರಾದವರಿಗೂ ಅವಕಾಶ
ಕೇವಲ ಇಂಜಿನಿಯರಿಂಗ್, ಐ.ಟಿ ಬಿಟಿ ಕಲಿತವರಿಗಷ್ಟೇ ಅಲ್ಲ, ಪಿಯುಸಿ ಅನುತ್ತೀರ್ಣರಾದವರಿಗೆ ಕೆಲಸ ದೊರೆಯಬೇಕು, ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹಲವು ಯೋಜನೆ ರೂಪಿಸಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿ, ಬಂಕಾಪುರ, ಉಡಚೆನ್ನಾಪುರ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿ ಹಾಗೂ ಸವಣೂರು ಐ.ಟಿ. ಐಗಳು ತಲಾ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೆ.ಎಸ್.ಆರ್.ಟಿ. ಐ ಪಾಲಿಟೆಕ್ನಿಕ್ ನಿರ್ಮಾಣವಾಗುತ್ತಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಕೌಶಲ್ಯಾಭಿವೃದ್ದಿ, ತರಬೇತಿಯನ್ನು ಎಲ್ಲಾ ಸಂಸ್ಥೆಗಳಲ್ಲಿಯೂ ದೊರೆಯುವಂತಾಗಬೇಕೆನ್ನುವ ಕನಸು ನನ್ನದು ಎಂದರು.
ಸವಣೂರಿನಲ್ಲಿ ಜವಳಿ ತರಬೇತಿ ಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿಯ ಪಶು ವೈದ್ಯಕೀಯ ಪಾಲಿಟೆಕ್ನಿಕ್ ನ್ನು ಆರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ಎಲ್ಲಾ ಸಂಸ್ಥೆಗಳು ಸದೃಢ ವಾಗಿ ಬೆಳೆದು ಸಾವಿರಾರು ಯುವಕರಿಗೆ ತರಬೇತಿ ನೀಡಿದರೆ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋವಿಡ್ ಇದ್ದರೂ ಕೂಡ ಆರ್ಥಿಕತೆ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೆಚ್ಚು ಹರಿದು ಬಂದಿದೆ. ಕರ್ನಾಟಕ ಪ್ರಗತಿಪರ ಆಡಳಿಗಾರರ ಕೈಯಲ್ಲಿ ಇದ್ದುದರಿಂದ ಇದು ಸಾಧ್ಯವಾಗಿದೆ ಎಂದರು.
ಸ್ವಾಭಿಮಾನದ ಬದುಕು
ಮುಂದಿನ ದಿನಗಳಲ್ಲಿ ಹೆಚ್ಚಿನ ಆರ್ಥಿಕತೆ, ಮೂಲ ಸೌಕರ್ಯ, ತರಬೇತಿ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಆದರೆ ಕರ್ನಾಟಕದ ಯುವಕರಿಗೆ ಕೆಲಸ, ಸ್ವಾಭಿಮಾನದ ಬದುಕು ಬದುಕಲು ಸಾಧ್ಯ ಎಂಬ ನಿಟ್ಟಿನಲ್ಲಿ ಪ್ರಗತಿಪರ, ದೂರದೃಷ್ಟಿ ಇರುವ ಯುವಕರ ಭವಿಷ್ಯವನ್ನು ಬರೆಯಲು ಈ ನಿರ್ಣಯಗಳನ್ನು ಮಾಡಲಾಗಿದೆ ಎಂದರು.
ಜವಳಿ ಪಾರ್ಕಿನಲ್ಲಿ 10 ಸಾವಿರ ಜನರಿಗೆ ಉದ್ಯೋಗ
ಸುಮಾರು 73 ಕೋಟಿ ರೂ.ಗಳ ಜಿ.ಟಿ. ಟಿ. ಸಿ ಇಲ್ಲಿ ಬರಲಿದೆ. ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್,ಅಲ್ಪಾವಧಿ, ಸರ್ಟಿಫೈಡ್ ಕೋರ್ಸುಗಳು ಲಭ್ಯವಿದೆ. ಜಗತ್ತಿನ ಆಧುನಿಕ ತರಬೇತಿಯನ್ನು ಇಲ್ಲಿ ಪಡೆಯಬಹುದು. ಜವಳಿ ಪಾರ್ಕ್, ಪಶು ವೈದ್ಯಕೀಯ ಪಾಲಿಟೆಕ್ನಿಕ್ ಬರುತ್ತಿದ್ದು, ಜವಳಿ ಪಾರ್ಕಿನಲ್ಲಿಯೇ 10 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದನ್ನು ಹೊರತುಪಡಿಸಿ 5 ಸಾವಿರ ಜನರಿಗೆ ಗಾರ್ಮೆಂಟ್ ಗಳಲ್ಲಿ ಕೆಲಸ ದೊರೆಯುತ್ತದೆ. ಯುವಕರಿಗೆ ಉದ್ಯೋಗದ ಭಿವಿಷ್ಯ ಬರೆಯಲು ಕಾರ್ಯಕ್ರಮ ರೂಪಿಸಿದ್ದು ಇದರ ಪ್ರಯೋಜನವನ್ನು ಯುವಕರು ಪಡೆಯಬೇಕೆಂದರು.
ಕೆಲಸ ಸಿಗುವ ಗ್ಯಾರಂಟಿ
ಜಿ.ಟಿ. ಟಿ. ಸಿ ಬಹಳ ಪ್ರಮುಖ ಸಂಸ್ಥೆ. ಇಂಜಿನಿಯರಿಂಗ್ ಮುಗಿಸಿದ ನಂತರ ಜಿ.ಟಿ. ಟಿ. ಸಿ ಬೆಂಗಳೂರಿನಲ್ಲಿ ಆರು ತಿಂಗಳ ತರಬೇತಿ ಪಡೆದಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಒಂದು ಭಾಗ ಇಂಜಿನಿಯರಿಂಗ್ ನಲ್ಲಿ ಕಲಿತಿದ್ದಾರೆ, ಜಿ.ಟಿ. ಟಿ. ಸಿ ಯಲ್ಲಿ 10 ಭಾಗ ಕಲಿತೆವು ಎಂದರು. ಇದರ ಪರಿಣಾಮವಾಗಿ ಟಾಟಾ ಮೊಟರ್ಸ್ ನಲ್ಲಿ ನೌಕರಿ ಲಭಿಸಿತು ಎಂದರು. ಇಲ್ಲಿ ತರಬೇತಿ ಪಡೆದವರಿಗೆ ಶೇ 100 ರಷ್ಟು ಕೆಲಸ ಸಿಗುವ ಗ್ಯಾರಂಟಿ ಇದೆ ಎಂದರು. ಇಲ್ಲಿನ ತರಬೇತಿ ವಿಧಾನ ಬಹಳಷ್ಟು ಉತ್ತಮವಾಗಿದೆ. ಪ್ರಮಾನಪತ್ರವಿದ್ದರೆ ಶೇ 50 ರಷ್ಟು ಅಂಕಗಳನ್ನು ಉದ್ಯೋಗದಲ್ಲಿ ನೀಡುತ್ತಾರೆ ಎಂದರು. ಜಿ.ಟಿ. ಟಿ.ಸಿ ಪ್ರವೇಶ ಪಡೆದು ತರಬೇತಿ ಪಡೆದರೆ ಉಜ್ವಲ ಭವಿಷ್ಯವಿರುತ್ತದೆ ಎಂದರು.
1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ
ಭಾರತಕ್ಕೆ ಕೌಶಲ್ಯವಿರುವ ಯುವಕರು ಅಗತ್ಯ. ನಮ್ಮ ಪ್ರಧಾನಿಗಳು ಜನಸಂಖ್ಯೆಯನ್ನು ಬಂಡವಾಳ ಎಂದು ಪರಿಗಣಿಸಿ, ಶೇ 40 ರಷ್ಟಿರುವ ಯುವಜನಾಂಗಕ್ಕೆ ಕೌಶಲ್ಯ ನೀಡಿದರೆ ಕೈಗಾರೀಕರಣಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು ಎಂದು ಸ್ಕಿಲ್ ಇಂಡಿಯಾ ಯೋಜನೆ ಪ್ರಾರಂಭ ಮಾಡಿದರು. ಇರರಲ್ಲಿ ಹಲವಾರು ವಿಧದ ತರಬೇತಿ ನೀಡಿ ಯುವಕರನ್ನು ತಯಾರು ಮಾಡಬಹುದಾಗಿದೆ. ರಾಜ್ಯದಲ್ಲಿ 1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ ನೀಡಲಾಗಿದೆ ಎಂದರು.
ಸಂಸ್ಥೆಯಾಗಿ ಪರಿವರ್ತನೆ
ಈ ವರ್ಷ ಜಿ.ಟಿ. ಟಿ. ಸಿ ಒಂದು ಸಂಸ್ಥೆಯನ್ನಾಗಿ ಪರಿವರ್ತನೆ ಮಾಡಲಾಗುತ್ತಿದ್ದು ಹೊಸ ಸಂರಚನೆ ನೀಡಲು ತೀರ್ಮಾನಿಸಿ ಜಿ.ಟಿ. ಟಿ. ಸಿ , ಐ.ಟಿ. ಐ, ಪಾಲಿಟೆಕ್ನಿಕ್ ಮೇಲ್ದರ್ಜೆಗೇರಿಸಲು ಬಹಳಷ್ಟು ಒತ್ತು ನೀಡಲಾಗಿದೆ. ಪಿಯುಸಿ ಅನುತ್ತೀರ್ಣರಾದವರಿಗೂ ವಿಶೇಷ ತರಬೇತಿಗೆ ಪ್ರವೇಶ ದೊರೆಯಲಿದೆ. 3 -6 ತಿಂಗಳು ತರಬೇತಿ ನೀಡಿ ಉದ್ಯೋಗ ದೊರೆಯುವವರೆಗೆ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆ ಕಲ್ಪಿಸಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವ ಶಿವರಾಮ್ ಹೆಬ್ಬಾರ್,ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ