Latest

ಸರಕಾರಿ ನೌಕರರಿಗೆ CM ನೀಡಿದ ಮತ್ತೊಂದು ಕರೆ ಏನು?

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು : ಸರ್ಕಾರಿ ನೌಕರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇದೇ ಅಕ್ಟೋಬರ್ ತಿಂಗಳಲ್ಲಿ ಹೊಸ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು.

ಸರ್ಕಾರಿ ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಗೆ ಸರ್ಕಾರದ ಆದೇಶವಾಗಿದೆ. ಎಂದರು.

ಸಂಕಷ್ಟದ ಸಮಯದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕರ್ತವ್ಯ ನಿರ್ವಹಿಸಬೇಕು

ಕೋವಿಡ್, ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಎಲ್ಲ ಹಂತದ ಸರ್ಕಾರಿ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರವಾಹದ ನಿರ್ವಹಣೆ, ಜನ ಜಾನುವಾರು,ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಬೆಳೆಹಾನಿಯಾಗಿರುವ ಸಂದರ್ಭದಲ್ಲಿ ಸರ್ಕಾರ ಜನರ ಪರವಾಗಿ ನಿಲ್ಲುತ್ತದೆ. ಈ ಸವಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದ್ದು, ಸರ್ಕಾರಿ ನೌಕರರು ಇದರಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಒಳ್ಳೆಯ ಆಡಳಿತಗಾರ ಜನರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿಕ್ರಿಯೆ ನೀಡುತ್ತಾನೆ. ಎಲ್ಲ ಸವಾಲುಗಳ ನಡುವೆ, ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲು ಸರ್ಕಾರಿ ನೌಕರರ ಸಹಕಾರ ಮುಖ್ಯ ಎಂದರು.

ಸೇವೆ ಮುಖಾಂತರ ಸಂತೃಪ್ತಿಯನ್ನು ಕಂಡುಕೊಳ್ಳುವ ಅವಕಾಶ :

ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರಿ ದೇವರ ಕೆಲಸ ಎಂದು ಬರೆಯಲಾಗಿದೆ. ದೇವರ ಕೆಲಸ ಎಂದರೆ ನಮ್ಮ ಆತ್ಮಸಾಕ್ಷಿಯಾಗಿ ಕೆಲಸವನ್ನು ಮಾಡಿದಾಗ ರಾಜ್ಯ ಸುಭಿಕ್ಷವಾಗುತ್ತದೆ. ಕಾರ್ಯಾಂಗ ಕೆಲಸದಿಂದ ನಾಡಿನ ಅಭಿವೃದ್ಧಿ, ಜನರ ಕಲ್ಯಾಣವಾಗುತ್ತದೆ. ನಾಡಿನ ಭವಿಷ್ಯವನ್ನು ನಿರ್ಣಯ ಮಾಡುವಂತಹ ಪ್ರಮುಖ ಕೆಲಸದಲ್ಲೀದ್ದೀರಿ ಎಂದು ಮರೆಯಬೇಡಿ. ನೀವುಗಳು ನೌಕರರಲ್ಲ, ಸರ್ಕಾರದ ಒಂದು ಪ್ರಮುಖ ಅಂಗ. ಕರ್ತವ್ಯಕ್ಕೂ ಕಾಯಕಕ್ಕೂ ಬಹಳ ವ್ಯತ್ಯಾಸವಿದೆ. ಕರ್ತವ್ಯವನ್ನು ಮೀರಿ, ಜವಾಬ್ದಾರಿಯುತವಾಗಿ ಜನಕಲ್ಯಾಣ ಕಾರ್ಯಕ್ರಮ ಜನರನ್ನು ಮುಟ್ಟುವವರೆಗೆ ಕೆಲಸ ಮಾಡುವುದು ಕಾಯಕ. ಸರ್ಕಾರಿ ನೌಕರರ ದುಡಿಮೆ ಸಮಾಜದ ಒಳಿತಿಗೆ ಕಾರಣವಾದರೆ , ಅದು ಕಾಯಕವಾಗುತ್ತದೆ. ಬಡಜನರಿಗೆ ನಿಮ್ಮ ನಿರ್ಣಯಗಳಿಂದ ಸಹಾಯವಾದರೆ ಅವರು ಹರಸುತ್ತಾರೆ. ಬಡವರಿಗೆ ಬದುಕನ್ನು ನೀಡಿದ ಸಂತೃಪ್ತಿ ನಿಮ್ಮದಾಗುತ್ತದೆ. ಸರ್ಕಾರಿ ನೌಕರರಿಗೆ ಸೇವೆ ಮುಖಾಂತರ ಸಂತೃಪ್ತಿಯನ್ನು ಕಂಡುಕೊಳ್ಳುವ ಅವಕಾಶವಿದೆ ಎಂದರು.

ಜನಕಲ್ಯಾಣದ ಕೆಲಸ ಮಾಡಲು ಒಂದು ಸಕಾರಣ ಸಾಕು :

ಖಾಸಗಿ ವಲಯದವರಿಗೆ ಜವಾಬ್ದಾರಿ, ಗುರಿ ಇರುತ್ತದೆ, ಆದರೆ ನಿಮಗೆ ಅದರ ಜೊತೆಗೆ ಅಧಿಕಾರವೂ ಇದೆ. ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಸಕಾರಾತ್ಮಕತೆಯಿಂದ ನಿಮ್ಮ ಅಧಿಕಾರವನ್ನು ಬಳಸಬೇಕು. ಸರ್ಕಾರಿ ನೌಕರರು ರಾಜ್ಯದ ಅಭಿವೃದ್ದಿಗೆ ಕೊಡುಗೆ ನೀಡಬಹುದಾಗಿದೆ. ಜನಕಲ್ಯಾಣದ ಕೆಲಸ ಮಾಡದಿರಲು ನೂರಾರು ಕಾರಣಗಳಿರಬಹುದು, ಆದರೆ ಕೆಲಸ ಮಾಡಲು ಒಂದು ಸಕಾರಣ ಸಾಕು.ಜನಸಾಮಾನ್ಯರು ನಮ್ಮ ಮಾಲೀಕರು. ಇವರಿಗಾಗಿ ದುಡಿಯುವುದೇ ನಮ್ಮ ಗುರಿಯಾಗಬೇಕು. ಜನರು ಕಚೇರಿಗೆ ಬಂದಾಗ ಗೌರವದಿಂದ ಕಾಣಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ :

ಕೋವಿಡ್ ನಿಂದ ಇಡೀ ವಿಶ್ವವೇ ನಲುಗಿದ್ದು, ಆರ್ಥಿಕತೆಯ ಹಿನ್ನಡೆಯಾಗಿದೆ. ಪ್ರಧಾನಿ ಮೋದಿಯವರು ತಿಳಿಸಿದಂತೆ ಜೀವ , ಜೀವನ ಉಳಿಯಬೇಕು. ಆರ್ಥಿಕತೆಯ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಭಾರತದ ಲಸಿಕಾಕರಣದ ಯಶಸ್ಸು ವಿಶ್ವವನ್ನು ನಿಬ್ಬೆರಗಾಗಿಸಿದೆ. ಸ್ವಚ್ಛ ಭಾರತದ ಜೊತೆಗೆ ಸಶಕ್ತ ಭಾರತದ ನಿರ್ಮಾಣವನ್ನು ಸಾಧ್ಯವಾಗಿಸಿದ್ದಾರೆ. ದೇಶದ ಆರ್ಥಿಕತೆ ಸುಧಾರಣೆಯನ್ನು ಕಾಣುತ್ತಿದೆ. ನಾನು ಮುಖ್ಯಮಂತ್ರಿಯಾದ ತಕ್ಷಣ, 15 ಸಾವಿರ ಕೋಟಿ ತೆರಿಗೆ ಹೆಚ್ಚಿಸಲಾಯಿತು. ಈಗ ಡಿಜಟಲೀಕರಣ ಯುಗವಾಗಿದೆ. ಈ ಆಧುನಿಕ ಕಾಲದಲ್ಲಿ ಜನರಿಗೆ ಸುಲಭವಾಗಿ, ವೇಗದಲ್ಲಿ ಮಾಹಿತಿಗಳು ದೊರೆಯುತ್ತಿದೆ. ಈ ವೇಗಕ್ಕೆ ಸರಿಯಾಗಿ ನೌಕರರು ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆ ಮುಂದಿರಬೇಕಾದರೆ ಹೊಸ ತಂತ್ರಜ್ಞಾನವನ್ನು ನಿಮ್ಮ ಕೆಲಸದಲ್ಲಿ ರೂಢಿಸಿಕೊಳ್ಳಬೇಕು. ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಸರ್ಕಾರಿ ನೌಕರರು ಹಸುಗಳನ್ನು ದತ್ತುಪಡೆಯಲು ಮುಖ್ಯಮಂತ್ರಿಗಳ ಕರೆ :

ಪುಣ್ಯ ಕೋಟಿ ಯೋಜನೆ ಕರ್ನಾಟಕದ ರಾಸುಗಳ ರಕ್ಷಣೆಗಾಗಿ ಇದೆ. 1 ಲಕ್ಷಕ್ಕಿಂತ ಹೆಚ್ವು ಹಸುಗಳು ಬೇರೆ ಬೇರೆ ಗೋಶಾಲೆಗಳಲ್ಲಿ ಇವೆ. ವಯಸ್ಸಾದ ಹಸುಗಳನ್ನು ನಾವು ಸಾಕುತ್ತಿದ್ದೇವೆ. ಪ್ರತಿ ಜಿಲ್ಲೆಗೆ ಈ ವರ್ಷ ಹೊಸ ಗೋಶಾಲೆ ಸ್ಥಾಪನೆ ಮಾಡುತ್ತಿದ್ದು ಅದಕ್ಕಾಗಿ 50.ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಜನರ ಸಹಭಾಗಿತ್ವ ಕೂಡ ಮುಖ್ಯ. ಆಗ ಅದು ನಿಜವಾಗಿಯೂ ಪಾಲುಗೊಳ್ಳುವಿಕೆಯ ಪ್ರಜಾಪ್ರಭುತ್ವ ವಾಗುತ್ತದೆ.

 

ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸಿ ವೆಬ್ ಸೈಟ್ ಸಹ ಅಭಿವೃದ್ಧಿ ಮಾಡಲಾಗಿದೆ. 11 ಸಾವಿರ ರೂ.ಗಳನ್ನು ಒಂದು ವರ್ಷಕ್ಕೆ ನಿಗದಿ ಮಾಡಿದ್ದು, ದತ್ತು ತೆಗೆದುಕೊಳ್ಳುವ ಗೋವಿನ ಚಿತ್ರವೂ ವೆಬ್ ಸೈಟ್ ನಲ್ಲಿ ಮೂಡುತ್ತದೆ. ಗೋವನ್ನು ದತ್ತು ಪಡೆಯಬಹುದು. ನಾನೇ 100 ಹಸುಗಳನ್ನು ದತ್ತು ಪಡೆದಿದ್ದೇನೆ ಹಾಗೂ ಮಂತ್ರಿಗಳೂ ದತ್ತು ಪಡೆಯಲು ವಿನಂತಿಸಿದ್ದೇನೆ ಎಂದರು.

 

ಹಸುಗಳ ಮೇಲೆ ಪ್ರೀತಿ, ಅನುಕಂಪ ಇದ್ದರೆ ಹಾಗೂ ಪುಣ್ಯ ಗಳಿಸಬೇಕೆಂದಿದ್ದರೆ ದತ್ತು ಪಡೆಯಬಹುದು. ಸರ್ಕಾರಿ ನೌಕರರ ವಿಶೇಷವಾಗಿ ವರ್ಗ ಎ ಮತ್ತು ಬಿ ಗುಂಪಿನಲ್ಲಿರುವವರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ವಿನಂತಿಸಿದರು.

7ನೇ ವೇತನ ಆಯೋಗ ರಚನೆಗೆ ಮುಹೂರ್ತ ಫಿಕ್ಸ್

https://pragati.taskdun.com/politics/7th-pay-commissionoctobercm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button