Latest

ಜನ ಫಲಾನುಭವಿಗಳಲ್ಲ, ಪಾಲುದಾರರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಹಾವೇರಿ ಜಿಲ್ಲೆಯಲ್ಲಿ 4.5 ಲಕ್ಷ ಫಲಾನುಭವಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಲಾಭ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಗಾಟಿಸಿ ಅವರು ಇಂದು ಮಾತನಾಡಿದರು.

ಹಾವೇರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳು ಇದ್ದು ಅವರಿಗೆ ಲಾಭವಾಗಿದೆ. ಬಡವರ ಬಗ್ಗೆ ಕಳಕಳಿಯಿರುವ ಪ್ರಧಾನಮಂತ್ರಿಗಳು ಇದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ , 17 ಲಕ್ಷ ಜನರಿಗೆ ಮಂಜೂರಾತಿ ನೀಡಲಾಗಿದೆ. ಪ್ರತಿ ಮನೆಗೆ ಶೌಚಾಲಯ, ಕುಡಿಯುವ ನೀರಿನ ಯೋಜನೆ, ವಿದ್ಯುಚ್ಛಕ್ತಿ, ಗ್ಯಾಸ್ ಸಿಲಿಂಡರ್ ನೀಡಿ ಬದುಕು ಕಟ್ಟಿ ಕೊಡಲು ಎಲ್ಲವನ್ನೂ ಕೊಟ್ಟಿದ್ದಾರೆ ಎಂದರು.

ಜನ ಫಲಾನುಭವಿಗಳಲ್ಲ, ಪಾಲುದಾರರು:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ಕೆಳಸ್ತರದಲ್ಲಿರುವ ಜನರನ್ನು ಮೇಲೆತ್ತಿ ಅವರ ಕಾಯಕಗಳಿಗೆ ಸಹಾಯ ಮಾಡಿ ನಿಮ್ಮೆಲ್ಲರ ಆದಾಯ ಹೆಚ್ಚಳ ಮಾಡಿ, ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಿ ಸ್ವಾಭಿಮಾನಿ, ಸ್ವಾವಲಂಬಿ ಬದುಕು ಬದುಕಬೇಕು ಎಂದು ಯೋಜನೆಗಳನ್ನು ರೂಪಸಲಾಗಿದೆ. ಜನ ಅಭಿವೃದ್ಧಿ ಪಾಲುದಾರರಾಗಬೇಕು. ಬದುಕಿನಲ್ಲಿ ಮುಂದೆ ಹೋಗಬೇಕೆಂಬ ಹಂಬಲವಿದ್ದಾಗ ಇತರರಿಗೆ ಪ್ರೇರಣೆಯಾಗಬಹುದು. ಮಕ್ಕಳನ್ನು ಬೆಳೆಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ನಾಡು ಕಟ್ಟಲು ಪಾಲುದಾರರರಾಗಬೇಕು. ಜನ ಫಲಾನುಭವಿಗಳಲ್ಲ, ಪಾಲುದಾರರು. ಜನರಿಗೆ ನೀಡಿರುವ ಸವಲತ್ತು ಅವರ ಹಕ್ಕು.ಜನರನ್ನು ಸಶಕ್ತಗೊಳಿಸಿದರೆ ದೇಶ ಮತ್ತು ನಾಡು ಮುಂದುವರೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ನೀವು ಆದಾಯ ತಂದು ಅಭಿವೃದ್ಧಿ ಪಾಲುದಾರರಾಗಬೇಕು ಎಂದರು.

ಜನಪರ ಯೋಜನೆಗಳು:
‌ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 67 ಲಕ್ಷ ರೈತ ಕುಟುಂಬಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 16 ಸಾವಿರ ಕೋಟಿ ರೂ.ಗಳು ರೈತರಿಗೆ ಮುಟ್ಟಿದೆ. ಈ ವರ್ಷ ಬಜೆಟ್ ನಲ್ಲಿ ರೈತರಿಗೆ 10 ಸಾವಿರ ನೀಡುವ ವಿನೂತನ ಯೋಜನೆ ರೂಪಿಸಲಾಗಿದೆ . ಸ್ತ್ರೀ ಸಾಮರ್ಥ್ಯ ಯೋಜನೆಯಡಿ 5 ಲಕ್ಷ ಮಹಿಳೆಯರಿಗೆ ಲಾಭವಾಗಲಿದೆ. ಪ್ರತಿ ವಾರ ಸ್ತ್ರೀ ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು. ಬ್ಯಾಂಕಿನವರೊಂದಿಗೆ ಸಂಪರ್ಕ ಸಾಧಿಸಲಾಗಿದೆ ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ರೈತಾಪಿ ಮಹಿಳೆಯರಿಗೆ ಅವರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. 40 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ದುಡಿಯುವ ವರ್ಗಕ್ಕೆ ಬೆಂಬಲ :
ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಜಮೀನು ಖರೀದಿಗೆ 20 ಲಕ್ಷ, 75 ಯೂನಿಟ್ ಉಚಿತ ವಿದ್ಯುತ್, ಮನೆ ನಿರ್ಮಾಣಕ್ಕೆ 2 ಲಕ್ಷ, 33 ಸಾವಿರ ಎಸ್ ಸಿ, ಎಸ್ ಟಿ ಮಕ್ಕಳಿಗೆ ಅಧಿಕವಾಗಿ ಹಾಸ್ಟೆಲ್ ವ್ಯವಸ್ಥೆ, ವಿದ್ಯಾಸಿರಿ ಯೋಜನೆ, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಗಳ ಅಭಿವೃದ್ಧಿಯತ್ತ ತನ್ನ ಬದ್ಧತೆಯನ್ನು ತೋರಿದೆ. ದಾವಣೆಗೆರೆಯಲ್ಲಿಯೂ ಬಂಜಾರ ಸೇರಿದಂತೆ ಹಲವು ಸಮುದಾಯಗಳ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕುಶಲಕರ್ಮಿಗಳ ಅಭಿವೃದ್ಧಿಗೆ ಕಾಯಕ ಯೋಜನೆ ಯಡಿ 50 ಸಾವಿರ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದುಡಿಯುವ ವರ್ಗಕ್ಕೆ ಬೆಂಬಲ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದ ಜನ ಶ್ರೀಮಂತರಾಗಬೇಕು:
ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಸಲುವಾಗಿ ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಉನ್ನತೀಕರಿಸಲಾಗಿದೆ. ಡಯಾಲಿಸಿಸ್ ಸೈಕಲ್ಸ್ ಹೆಚ್ಚಳ, ಕ್ಯಾನ್ಸರ್ ಚಿಕಿತ್ಸೆ, ಕಿವುಡರಿಗೆ ಶ್ರವಣಸಾಧನ ಖರೀದಿಗೆ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೊಳಿಸಲಾಗುತ್ತಿದ್ದು, 2 ರಿಂದ 3 ಲಕ್ಷ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ರಾಜ್ಯದ ಜನ ಶ್ರೀಮಂತರಾದರೆ, ರಾಜ್ಯ ಶ್ರೀಮಂತವಾಗುತ್ತದೆ. ಜಿಲ್ಲೆಯಲ್ಲಿ ಜೋಳ, ಮೆಣಸಿನಕಾಯಿ ಸಂಸ್ಕರಣಾ ಘಟಕಗಳು, ಟೆಕ್ಸ್ ಟೈಲ್ ಪಾರ್ಕ್ , ನೀರಾವರಿ ಯೋಜನೆಗಳು, ಮಾವಿನ ಸಂಸ್ಕರಣಾ ಘಟಕಗಳು ಆಗುತ್ತಿವೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಶೀಘ್ರದಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button